ಕಲಬುರಗಿ | ಒಣಗುತ್ತಿರುವ ತೊಗರಿ ಬೆಳೆ : ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ರೈತರಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಮನವಿ

Update: 2024-11-26 12:18 GMT

ಪ್ರಿಯಾಂಕ್ ಖರ್ಗೆ

ಕಲಬುರಗಿ : ಜಿಲ್ಲೆಯಲ್ಲಿ ನವೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಕಾರಣ ತೇವಾಂಶದ ಕೊರತೆಯಾಗಿರುವುದರಿಂದ ಒಣಬೇರು ಕೊಳೆ ರೋಗ ಹಾಗೂ ಮಚ್ಚೆರೋಗ ಕಂಡು ಬಂದಿರುವುದರಿಂದ ತೊಗರಿ ಬೆಳೆ ಒಣಗಲಾರಂಭಿಸಿದ್ದು, ರೈತರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರೈತರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲಬುರಗಿ ಜಿಲ್ಲೆಯ ವಾಡಿಕೆ ಮಳೆ 17.4 ಮಿ.ಮಿ ಆಗಿದ್ದು, 5.6 ಮಿ.ಮಿ ಕಡಿಮೆ ಮಳೆಯಾಗಿರುತ್ತದೆ. ಇದರಿಂದ ಕಡಿಮೆ ಆಳ ಮತ್ತು ಮಧ್ಯಮ ಆಳದ ಭೂಮಿಯಲ್ಲಿ ತೇವಾಂಶದ ಕೊರತೆ ಕಂಡು ಬಂದಿರುತ್ತದೆ. ಬಿತ್ತನೆಯಾದ ತೊಗರಿ ಬೆಳೆಯಲ್ಲಿ ತೇವಾಂಶದ ಬಾಧೆಗೆ ಮ್ಯಾಕ್ರೋಫೋಮಿನಾ ಫೆಜಿಯೊಲ್ಕೆ ಶೀಲಿಂದ್ರದಿಂದ ಬರುವ ಒಣ ಬೇರು ಕೊಳೆ ರೋಗ ಹೆಚ್ಚಾಗಿ ಕಾಣಿಸಿಕೊಂಡಿರುತ್ತದೆ. ಅದರೊಂದಿಗೆ ಫೈಟೊಪ್ಲೋರಾ ಮಚ್ಚೆ ರೋಗವು ಅಲ್ಲಲ್ಲಿ ಉಲ್ಬಣಿಸಿರುವುದು ಕಂಡು ಬಂದಿರುವುದರಿಂದ ತೊಗರಿ ಒಣಗಲಾರಂಬಿಸಿರುತ್ತದೆ ಎಂದು ಸಚಿವರು ಹೇಳಿದ್ದಾರೆ.

ಕೃಷಿ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮ ಅನುಸರಿಸಿ :

ಬೆಳೆಯಲ್ಲಿ ಹಸಿ ಆರದಂತೆ ಸತತ ಅಂತರ ಬೇಸಾಯ ಮಾಡಬೇಕಲ್ಲದೆ, ಭೂಮಿ ಎರೆಬಿಡಿ (ಬಿರುಕು) ಬಿಡದಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆಯಲ್ಲಿ ಶೇ.90ರ ಸಹಾಯಧನದಲ್ಲಿ ಲಭ್ಯವಿರುವ ತುಂತುರು ನೀರಾವರಿ ಘಟಕ ಹಾಗೂ ಶೇ.50ರ ಸಹಾಯಧನದಲ್ಲಿ ಲಭ್ಯವಿರುವ PVC ಪೈಪು ಹಾಗೂ HDPE Roll ಪೈಪು ಗಳನ್ನು ಬಳಸಿ ಸಮೀಪದ ಬಾವಿ ಅಥವಾ ಬೋರವೆಲ್ ನಿಂದ ಸಾಲು ಬಿಟ್ಟು ಸಾಲು ನೀರು ಹಾಯಿಸುವುದು.

ಶಿಲೀಂದ್ರದಿಂದ ಬರುವ ರೋಗವನ್ನು ನಿಯಂತ್ರಿಸಲು 5-10 ಗ್ರಾ ಟ್ರೈಕೊಡರ್ಮ (ಜೈವಿಕ ಶಿಲೀಂದ್ರನಾಶಕ) ಅಥವಾ ಕಾರ್ಬೇಂಡೆಜಿಮ್ ಹಾಗೂ ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ 2.5 ಗ್ರಾಂ ಬೆರಸಿ ಗಿಡದ ಕಾಂಡ ಅಥವಾ ಬೇರಿಗೆ ಸಿಂಪಡಿಸಬೇಕು. ಟ್ರೈಕೊಡರ್ಮ (ಜೈವಿಕ ಶಿಲೀಂದ್ರನಾಶಕ) ಮತ್ತು ಕಾರ್ಬೇಂಡೆಜಿಮ್ ಹಾಗೂ ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರನಾಶಕಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.50ರ ಸಹಾಯಧನದಲ್ಲಿ ಲಭ್ಯವಿರುತ್ತದೆ ಎಂದು ಹೇಳಿರುವ ಸಚಿವರು, ಈ ಕುರಿತು ರೈತರು ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News