ಕಲಬುರಗಿ | ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ನೀಲಾ ಪುನರಾಯ್ಕೆ
ಕಲಬುರಗಿ: ಸಿಪಿಐ(ಎಂ) ಪಕ್ಷದ ಕಲಬುರಗಿಯ ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ನೀಲಾ ಅವರನ್ನು ಪುನರಾಯ್ಕೆ ಮಾಡಲಾಗಿದೆ.
ನ.24, 25ರಂದು ಎರಡು ದಿನಗಳ ಕಾಲ ನಡೆದ ಕಲಬುರಗಿ ಜಿಲ್ಲಾ ಸಮ್ಮೇಳನದಲ್ಲಿ 17ಸದಸ್ಯರ ಜಿಲ್ಲಾ ಸಮಿತಿಯು ಇವರನ್ನು ಮತ್ತೆ ಆಯ್ಕೆ ಮಾಡಿದೆ. ಅವರ ಜೊತೆ ಆರು ಜನರನ್ನು ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರನ್ನಾಗಿ ನೇಮಿಸಲಾಯಿತು.
ಕಾ.ಶ್ರೀಮಂತ ಬಿರಾದಾರ, ಕಾ.ಭೀಮಶೆಟ್ಟಿ ಯಂಪಳ್ಳಿ, ಕಾ.ಶರಣಬಸವ ಮಮಶೆಟ್ಟಿ, ಕಾ.ಗೌರಮ್ಮ ಮತ್ತು ಕಾ.ಸುಧಾಮ ಧನ್ನಿ ಇವರು ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಆಯ್ಕೆಯಾದರು. ಕಾ.ಶಾಂತಾ ಘಂಟಿ, ಕಾ.ಸುಭಾಷ ಹೊಸಮನಿ, ಕಾ.ಮಲ್ಲಮ್ಮ ಕೋಡ್ಲಿ, ಕಾ.ಚಂದಮ್ಮ ಗೋಳಾ, ಕಾ.ಶೇಕಮ್ಮ, ಕಾ.ನಾಗಯ್ಯ ಸ್ವಾಮಿ, ಕಾ.ಪಾಂಡುರಂಗ ಮಾವಿನಕರ್, ಕಾ.ಶಿವಶರಣ ಧನ್ನೂರ, ಕಾ.ಪ್ರಭು ಪ್ಯಾರಾಬುದ್ದಿ, ಕಾ.ಸಲ್ಮಾನ ಖಾನ್, ಕಾ.ಗುರು ಚಾಂದಕವಠೆ ಇವರನ್ನು ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಎರಡು ದಿನಗಳ ಈ ಸಮ್ಮೇಳನದಲ್ಲಿ ಮರಳು ನೀತಿಯ ಕಗ್ಗಂಟು ನಿಯಮಾವಳಿಗಳ ಅಡ್ಡಿ ವಿರೋಧಿಸಿ, ದಲಿತರ ಮೇಲಿನ ದೌರ್ಜನ್ಯ ಖಂಡಿಸಿ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ, ಸಾರ್ವತ್ರಿಕವಾಗಿ ಎಲ್ಲ ಕಾರ್ಮಿಕರಿಗೂ ಮಾಸಿಕ ರೂ.31,000 ವೇತನ ಜಾರಿಗೆ ಆಗ್ರಹಿಸಿ, ರೈತರ ಬೆಳೆಗಳಿಗೆ ಎಂಎಸ್ ಪಿ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ, ಭೂಮಿಯ ಪ್ರಶ್ನೆಯನ್ನು ಬಗೆಹರಿಸಿ ರೈತರ ಕೈಯಲ್ಲಿ ಕೃಷಿ ಭೂಮಿ ಉಳಿಸಲು ಒತ್ತಾಯಿಸಿ, ಅನುಚ್ಛೇದ 371 ಜೆ ಕಾಯ್ದೆಯಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣ ಒದಗಿಸಲು ಆಗ್ರಹಿಸಿ, ದೇವದಾಸಿ ಮಹಿಳೆಯರಿಗೆ ಭೂಮಿ ವಸತಿ ವಿತರಿಸಲು ಆಗ್ರಹಿಸಿ, ದೇವದಾಸಿಯರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಶಾಲೆ ಒದಗಿಸಲು ಆಗ್ರಹಿಸಿ, ಜಿಲ್ಲೆಯಲ್ಲಿ ಸೌಹಾರ್ದ ಪರಂಪರೆಗೆ ಧಕ್ಕೆಯಾಗದಂತೆ ಕ್ರಮವಹಿಸಲು ಆಗ್ರಹಿಸಿ, ಉದ್ಯೋಗ ಖಾತ್ರಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಒತ್ತಾಯಿಸಿ, ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಪೌರ ಕಾರ್ಮಿಕರ ಕೆಲಸ ಖಾಯಮ್ಮಾತಿಗೆ ಒತ್ತಾಯಿಸಿ, ಸರಕಾರಿ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಸಿ, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಆಗ್ರಹಿಸಿ, ಜಿಲ್ಲೆಯಲ್ಲಿರುವ ಎಲ್ಲ ವಸತಿಹೀನರಿಗೆ ಮನೆಗಳನ್ನು ವಿತರಿಸಲು ಆಗ್ರಹಿಸಲು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯ ಸಮ್ಮೇಳನವು ಡಿ.29, 30 ಮತ್ತು 31ರಂದು ತುಮಕೂರಿನಲ್ಲಿ ನಡೆಯಲಿದ್ದು, ಜಿಲ್ಲೆಯಿಂದ 12 ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದ ರ್‍ಯಾಲಿಗೆ ಜಿಲ್ಲೆಯಿಂದ ಜನರು ಭಾಗವಹಿಸುವರು ಎಂದು ಕಾರ್ಯದರ್ಶಿ ಕೆ.ನೀಲಾ ತಿಳಿಸಿದ್ದಾರೆ.