ಕಲಬುರಗಿ | ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪ್ರತಿಭಟನೆ : ವಿಡಿಯೋ ವೈರಲ್

Update: 2024-11-26 15:59 GMT

ಕಲಬುರಗಿ : ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುವುದು ಸೇರಿದಂತೆ ಜೈಲು ಅಧೀಕ್ಷಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೈದಿಗಳು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

ಮಂಗಳವಾರ ಬೆಳಿಗ್ಗೆಯಿಂದ ಕೈದಿಗಳು ಕಾರಾಗೃಹದ ವ್ಯವಸ್ಥೆ ವಿರುದ್ಧ ಆಹಾರ ಸೇವಿಸದೇ ಪ್ರತಿಭಟನೆ ನಡೆಸಿದ್ದಾರೆ. ಕಾರಾಗೃಹಕ್ಕೆ ಎಡಿಜಿಪಿ, ಜಿಲ್ಲಾಧಿಕಾರಿ, ನ್ಯಾಯಾಧೀಶರು ಆಗಮಿಸಿ ಸಮಸ್ಯೆ ಆಲಿಸಬೇಕೆಂದು ಪಟ್ಟುಬಿಡದೇ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಮತ್ತು ಪಿಎ ಶ್ರೀಕಾಂತ್ ರಂಜೇರಿ ಅವರನ್ನು ಕೂಡಲೇ ವರ್ಗಾಯಿಸಬೇಕೆಂದು ನ್ಯಾಯಾಧೀಶರಿಗೆ, ಹಲವು ಕೈದಿಗಳು ಸಹಿ ಹಾಕಿ ಬರೆದಿರುವ ಪತ್ರ, ಮಂಗಳವಾರ ಕೈದಿಗಳು ಪ್ರತಿಭಟಿಸಿದ್ದಾರೆ ಎನ್ನಲಾದ ಫೊಟೋ, ವಿಡಿಯೋ ವೈರಲ್ ಆಗಿವೆ.

ʼಜೈಲಿನಲ್ಲಿ ಎಲ್ಲಾ ಕೈದಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಇಲ್ಲಿನ ಕೆಲವೊಂದು ಸಮಸ್ಯೆಗಳನ್ನು ಮುಖ್ಯ ಅಧೀಕ್ಷಕಿಯವರ ಬಳಿ ಹೇಳಲು ಹೋದರೆ, ಅವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪ್ರತಿಯೊಂದು ಸಮಸ್ಯೆಗಳಿಗೂ ಅವರ ಪಿಎ ಶ್ರೀಕಾಂತ ಅವರಿಂದ ಹಣ ಬೇಡಿಕೆ ಇಡುತ್ತಾರೆ. ಹಣ ಕೊಡದೆ ಹೋದರೆ ಬೇರೆ ಜೆಲ್ಲಿಗೆ ಶಿಫ್ಟ್ ಮಾಡುತ್ತೇನೆ, ಇಲ್ಲದಿದ್ದರೆ ಲೈಂಗಿಕ ಆರೋಪ ಹೊರಸಿ ಎಫ್ಐಆರ್ ದಾಖಲಿಸಿ ಮತ್ತೊಂದು ಜೈಲಿಗೆ ವರ್ಗಾಯಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆʼ ಎಂದು ಪತ್ರದಲ್ಲಿ ಕೈದಿಗಳು ಅರೋಪಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜೈಲು ಅಧೀಕ್ಷಕರಿಗೆ ಸಂಪರ್ಕ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

 

Full View

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News