ಕಲಬುರಗಿ | 36 ಗಂಟೆಗಳಲ್ಲಿ ಮಗು ಅಪಹರಣ ಪ್ರಕರಣ ಭೇದಿಸಿದ ಪೊಲೀಸರು: ತಾಯಿ ಮಡಿಲು ಸೇರಿದ ಹಸುಳೆ
ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆ(ಜೀಮ್ಸ್)ಯ ಆವರಣದ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಿಂದ ಅಪಹರಿಸಲ್ಪಟ್ಟಿದ್ದ ನವಜಾತ ಶಿಶುವನ್ನು ನಗರ ಪೊಲೀಸರು 36 ಗಂಟೆಗಳ ಒಳಗೆ ಪತ್ತೆ ಹಚ್ಚಿ ಮಗುವನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಕಳವಾಗಿದ್ದ ಮಗುವನ್ನು ಕಮಿಷನರ್ ಡಾ.ಶರಣಪ್ಪ ಎಸ್.ಡಿ. ನೇತೃತ್ವದ ಪೊಲೀಸ್ ತಂಡ ಕ್ಷಿಪ್ರ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿ ಬುಧವಾರ ತಡರಾತ್ರಿ ಆಸ್ಪತ್ರೆಗೆ ಧಾವಿಸಿ, ತಾಯಿಯ ಮಡಿಲಿಗೆ ಸೇರಿಸಿದೆ. ಈ ವೇಳೆ ಭಾವುಕರಾದ ಪೋಷಕರು ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು.
ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ಶಿಶುವನ್ನು ಸೋಮವಾರ ಮುಂಜಾವ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಿದ್ದರು. ಈ ಬಗ್ಗೆ ಬ್ರಹ್ಮಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗು ಪತ್ತೆಗೆ ಕಮಿಷನರ್ ಡಾ.ಶರಣಪ್ಪ ಎಸ್.ಡಿ. ಮಾರ್ಗದರ್ಶನದಲ್ಲಿ ಎಸಿಪಿ ಕನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ತನಿಖೆ ನಗರ ಪೊಲೀಸರ ತಂಡ ರಚಿಸಲಾಗಿತ್ತು. ಮಗುವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಕಮಿಷನರ್ ಡಾ.ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ.
ಮಗು ಅಪಹರಣ ಪ್ರಕರಣವನ್ನು ಕೇವಲ ಒಂದೇ ದಿನದಲ್ಲಿ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.