ಕಲಬುರಗಿ | ಸೇಡಂನಲ್ಲಿ 24ನೇ ವರ್ಷದ ʼಅಮ್ಮ ಪ್ರಶಸ್ತಿʼ ಪ್ರದಾನ

Update: 2024-11-27 11:29 GMT

ಕಲಬುರಗಿ : ಜಗತ್ತಿನಲ್ಲಿ ಎರಡು ಸುರಕ್ಷಿತ ಸ್ಥಳವೆಂದರೆ ಅಪ್ಪನ ಹೆಗಲು, ಅಮ್ಮನ ಮಡಿಲು ಹಾಗಾಗಿ ತಾಯಿ, ತಂದೆಯರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಜಗತ್ತಿನ ಎಲ್ಲ ಪ್ರಶಸ್ತಿಗೂ ಮಿಗಿಲಾದದ್ದು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಹೇಳಿದ್ದಾರೆ.

ಸೇಡಂ ಪಟ್ಟಣದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಪಟ್ಟಣದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ 24ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ದೇಶದ ಉದ್ಧಗಲಕ್ಕೂ ನೀಡುವ ಪ್ರಶಸ್ತಿಗಳ ಆಯ್ಕೆಯನ್ನು ಪ್ರಶ್ನೆ ಮಾಡುವ ಇಂದಿನ ದಿನಗಳಲ್ಲಿ, ಅಳೆದು ತೂಗಿ ನೀಡುತ್ತಿರುವ ಅಮ್ಮ ಪ್ರಶಸ್ತಿ ಶ್ರೇಷ್ಠತೆಯನ್ನು ಒಳಗೊಂಡಿದೆ. ಇಂತಹ ಮಾನದಂಡಗಳು ಅನುಸರಿಸುವುದರಿಂದ ನಿಜವಾದ ಸಾಧಕರಿಗೆ ಗೌರವ ಸಿಗಲು ಸಾಧ್ಯವಾಗಲಿದೆ. ಮುಂಬರುವ ದಿನಗಳಲ್ಲಿ ನಿಷ್ಠುರವಾದ ಸಾಹಿತ್ಯ ಮತ್ತು ಸಾಹಿತಿಗಳಿಗೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಕೊಡಮಾಡುವ ಇಂತಹ ಪ್ರಶಸ್ತಿಗಳು ಲಭಿಸಬೇಕಾಗಿದೆ ಎಂದರು.

ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ, ವೀರೇಂದ್ರ ರಾವಿಹಾಳ್, ಪೂರ್ಣಿಮಾ ಮಾಳಗಿಮನಿ, ದ್ವಾರನಕುಂಟೆ ಪಾತಣ್ಣ, ಗುರುಪ್ರಸಾದ ಕಂಟಲಗೆರೆ, ಡಾ.ಪರ್ವಿನ ಸುಲ್ತಾನಾ, ಡಾ.ಪ್ರಕಾಶ ಭಟ್, ಡಾ.ಎಚ್.ಎಸ್.ಸತ್ಯನಾರಾಯಣ, ಮಂಜುನಾಥ ಚಾಂದ್, ಶಿವಾನಂದ ತಗಡೂರು (ಕೋವಿಡ್ ಕಥೆಗಳು) ಅವರಿಗೆ ಅಮ್ಮ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಕೋರಿಸಿದ್ದೇಶ್ವರ ಮಠದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಬಸವರಾಜ ಸಾದರ, ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರು ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News