ಕಲಬುರಗಿ | ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ ಉಡುಪಿ ಶ್ರೀಗಳ ವಿರುದ್ಧ ಕ್ರಮಕ್ಕೆ ಡಿಎಸ್ಎಸ್ ಒತ್ತಾಯ
ಕಲಬುರಗಿ : ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡಿರುವ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿ.2ರಂದು ಬೆಂಗಳೂರಿಗೆ ನಿಯೋಗ ತೆರಳಿ ಸಿಎಂ ಮತ್ತು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಯೋಗದಲ್ಲಿ ಸುಮಾರು 50 ಜನ ಸಂಘಟನೆಯ ಪ್ರಮುಖರು ಭಾಗವಹಿಸಲಿದ್ದು, ಒಂದು ವೇಳೆ ಈ ಬೇಡಿಕೆಗೆ ಸರಕಾರ ಸ್ಪಂದಿಸದಿದ್ದರೆ, ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ವಿಶ್ವ ಹಿಂದೂ ಪರಿಷತ್ತಿನಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ನಂತರ ಜಾತ್ಯತೀತ ರಾಷ್ಟ್ರವಾಗಿದೆ. ಈಗಿನ ಸಂವಿಧಾನ ಹೋಗಿ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಾಗಿದೆ ಎಂದು ಹೇಳಿದ್ದಾರೆ. ಅವರಿಗೆ ಮಾತನಾಡುವ ಹಕ್ಕನ್ನು ನೀಡಿದ್ದೂ ಈಗಿನ ಸಂವಿಧಾನ ಎನ್ನುವುದನ್ನು ಸ್ವಾಮೀಜಿ ಮರೆಯಬಾರದು ಎಂದು ಕಿಡಿಕಾರಿದರು.
ಸ್ವಾತಂತ್ರ್ಯ ಭಾರತದ ಸಂವಿಧಾನವನ್ನು ನಾಶ ಮಾಡುವ ಹುನ್ನಾರಗಳು ಹಿಂದಿನಿoದಲೂ ನಡೆಯುತ್ತಿವೆ. ಸಂವಿಧಾನ ಪ್ರಾಚೀನ ಹಿಂದೂ ಶಾಸ್ತ್ರ ಗ್ರಂಥಗಳ ಆಧಾರದ ಮೇಲೆ ರಚಿಸಬೇಕೆಂದು ಕೋಲ್ಕತ್ತ ಮೂಲದ ಅಖಿಲ ಭಾರತ ವರ್ಣಾಶ್ರಮ ಸ್ವರಾಜ್ ಸಂಘ ಒತ್ತಾಯಿಸಿತ್ತು. ಈಗ ಸಂಘ ಪರಿವಾರದ ಕೆಲನಿಷ್ಟ ಮಠಾಧೀಶರು ಸಂವಿಧಾನದ ವಿರುದ್ಧ ಅಪಸ್ವರ ತೆಗೆಯುತ್ತಿದ್ದಾರೆ. ದಲಿತ, ದಮನಿತರ ಮೀಸಲಾತಿ ವ್ಯವಸ್ಥೆಯನ್ನು ಪೇಜಾವರ ಶ್ರೀಗಳಿಗೆ ಸಹಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಅಜೀಜಸಾಬ ಐಕೂರ್, ಪರಶುರಾಮ ಯಡ್ರಾಮಿ ಇತರರಿದ್ದರು.