ನಾವು ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದವರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ರಾಯಚೂರು : ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಉಪ ಚುನಾವಣೆಯಲ್ಲೂ ಮುಖಭಂಗವಾಗಿದೆ. ಬಿಜೆಪಿ ಪಕ್ಷದ ಸಂಘಟನೆ ನಮ್ಮ ಹೋರಾಟದ ಉದ್ದೇಶವಾಗಿದೆ. ನಾವೂ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದವರು, ಮಧ್ಯದಿಂದ ಲೀಡರ್ ಆದವರು ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ರಾಯಚೂರಿನ ಅತ್ತನೂರ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ವಕ್ಫ್ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅತಿದೊಡ್ಡ ಸಂಚು ನಡೆಯುತ್ತಿದ್ದು ಬಿಜೆಪಿ ವಿರುದ್ದ ಸುಳ್ಳು ಕಂತೆ ಸೃಷ್ಟಿಸಲಾಗುತ್ತಿದೆ. ಈಗ ಯಾವ ಚುನಾವಣೆಯೂ ಇಲ್ಲ ಆದರೆ ರೈತರು, ಮಠ, ಮಂದಿರಗಳಿಗೆ ವಕ್ಫ್ ಎಂದು ನಮೂದಿಸುವ ಕುತಂತ್ರದ ವಿರುದ್ದ ಜಾಗೃತಿ ಮೂಡಿಸಲಾಗುತ್ತಿದೆ. ಹೊರತು ಪಕ್ಷ ವಿರೋಧಿಗಳು ನಾವಲ್ಲ ಎಂದರು.
ನಾನು ಸೇರಿದಂತೆ ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ನಾಲ್ಕೈದು ಬಾರಿ ಶಾಸಕರು, ಸಚಿವರಾಗಿದ್ದೇವೆ. ನಮಗೇನು ಅಧಿಕಾರದ ಹುಚ್ಚು ಹಿಡಿದಿಲ್ಲ. ಈಗ ಚುನಾವಣೆಯೂ ಇಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ ಎಂದು ಹೇಳಿದರು.
ವಕ್ಫ್ ವಿರುದ್ಧ ನಮ್ಮ ಹೋರಾಟಕ್ಕೆ ಬಿಜೆಪಿಯ ಕೆಲ ನಾಯಕರು ಸ್ಥಳೀಯ ಕಾರ್ಯಕರ್ತರಿಗೆ ನಮ್ಮ ಹೋರಾಟದಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಕಾರ್ಯಕರ್ತರು ನೊಟೀಸ್ ಗೆ ಹೆದರದೆ ರೈತರ ಜೊತೆ ಬೀದಿಗಿಳಿದು ಹೋರಾಟ ಮಾಡಬೇಕು. ನಾವೂ ಬಿಜೆಪಿಯವರು ಪಕ್ಷ ಸಂಘಟನೆಗಾಗಿ ದುಡಿದವರು ಮಧ್ಯದಿಂದ ನಾಯಕರಾದವರಲ್ಲ ಎಂದು ಹೇಳಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ, ಎನ್.ಆರ್.ಸಂತೋಷ, ಕುಮಾರ ಬಂಗಾರಪ್ಪ, ಜಿ.ಎಂ ಸಿದ್ದೇಶ್ವರ, ಅರವಿಂದ ಲಿಂಬಾವಳಿ, ಬಿ.ಪಿ ಹರೀಶ ಉಪಸ್ಥಿತರಿದ್ದರು.