ಕಲಬುರಗಿ | ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು : ವೈದ್ಯರ ನಿರ್ಲಕ್ಷ್ಯ ಆರೋಪ
ಕಲಬುರಗಿ : ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.
ಆಳಂದ ತಾಲ್ಲೂಕಿನ ಮಟಕಿ ಗ್ರಾಮದ ಭಾಗ್ಯಶ್ರೀ ಶಿವಾಜಿ ಮುರಳಿ (22) ಮೃತ ಬಾಣಂತಿ ಎಂದು ಗುರುತಿಸಲಾಗಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಭಾಗ್ಯಶ್ರೀ ಅವರನ್ನು ಸೋಮವಾರ ಮಧ್ಯಾಹ್ನ ಅಫಜಲಪುರ ತಾಲ್ಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಂಗಳವಾರ ಮುಂಜಾನೆ 8 ಗಂಟೆಯ ಸುಮಾರಿಗೆ ಗಂಡು ಮಗುವಿಗೆ ಭಾಗ್ಯಶ್ರೀ ಜನ್ಮ ನೀಡಿದ್ದರು. ಆ ಬಳಿಕ ರಕ್ತದೊತ್ತಡ ಕಡಿಮೆಯಾಯಿತು. ತಕ್ಷಣವೇ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿಯೇ ಬಾಣಂತಿ ಮೃತಪಟ್ಟಿದ್ದಾರೆ, ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಸರ್ಜನ್ ರುಬಿಯಾ ಆಸ್ಮಾ ಹಾಗೂ ಡಿಹೆಚ್ ಓ ಶರಣಬಸಪ್ಪ ಕ್ಯಾತನಾಳ್ ಜಂಟಿ ಹೇಳಿಕೆ ನೀಡಿದ್ದು, ಅಫಜಲಪುರ ಆಸ್ಪತ್ರೆಯಿಂದ ರೋಗಿ ರೆಫರ್ ಆಗಿ ಇಲ್ಲಿಗೆ ಬಂದಿದ್ದರು. ರೋಗಿ ಇಲ್ಲಿಗೆ ಬಂದಾಗ ಪಲ್ಸ್, ಬಿಪಿ ಏನು ರೇಕಾರ್ಡ್ ಇರಲಿಲ್ಲ. ಇದನ್ನು ಗಮನಿಸಿದ ನಮ್ಮ ವೈದ್ಯರ ತಂಡಕ್ಕೂ ಕೂಡ ಆಘಾತವಾಗಿತ್ತು, ಆದರೂ ನಮ್ಮ ತಂಡ ಎರಡು ಗಂಟೆ ಚಿಕಿತ್ಸೆ ನೀಡಿ ಪ್ರಯತ್ನ ಮಾಡಿದ್ದೆವು. ಬಿಪಿ, ಪಲ್ಸ್, ಹಾರ್ಟ್ ರೇಟ್ ಕೂಡ 150 ಇತ್ತು, ಎಲ್ಲಾ ರೀತಿಯ ಪ್ರಯತ್ನ ಮಾಡಿ ಜೀವ ಉಳಿಸುವ ಪ್ರಯತ್ನ ಮಾಡಿದ್ದೇವೆ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಸಾವು ಆಗಿರುವುದಕ್ಕೆ ನಾವು ವಿಷಾದ ವ್ಯಕ್ತ ಪಡಿಸುತ್ತೆವೆ. ಅಫಜಲ್‌ಪುರದಲ್ಲಿ ಇವತ್ತು ಅವರಿಗೆ ಎರಡನೇ ಪ್ರಸವವಾಗಿದೆ. ಬಾಣಂತಿ ಸುಸ್ತಾಗಿದ್ದರಿಂದ ನಮ್ಮ ವೈದ್ಯರು 108 ಆಂಬುಲೆನ್ಸ್ ನಲ್ಲಿ ಕಲಬುರಗಿಗೆ ಕಳುಹಿಸಿದ್ದಾರೆ. ಇಲ್ಲಿಗೆ ಬಂದ ಮೇಲೆ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಎಲ್ಲಾ ರೀತಿಯ ಚೆಕ್ ಅಪ್ ಮಾಡಿ ಕಳುಹಿಸಲಾಗಿದೆ. ಅಫಜಲ್‌ಪುರದಲ್ಲಿ ಡಾ.ಶೃತಿ ತಪಾಸಣೆ ಮಾಡಿ ಬಾಣಂತಿಗೆ ರಕ್ತದ ಅವಶ್ಯಕತೆ ಇರುವುದಕ್ಕೆ ಇಲ್ಲಿಗೆ ಕಳುಹಿಸಿದ್ದಾರೆ. ಅತಿಯಾದ ರಕ್ತಸ್ರಾವವಾಗಿತ್ತು. ಇದರ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಡಿಹೆಚ್ಓ ಶರಣಬಸಪ್ಪ ಕ್ಯಾತನಾಳ