ಕಲಬುರಗಿ | ದೇಶದಲ್ಲಿ ಸಮಾಜವಾದವನ್ನು ಸ್ಥಾಪಿಸುವ ಕನಸು ಕಂಡವರು ಭಗತ್‍ಸಿಂಗ್ : ಈಶ್ವರ ಕೆ.

ಕಲಬುರಗಿ : ಭಗತ್ ಸಿಂಗ್ ಕೇವಲ ಸ್ವಾತಂತ್ರ್ಯದ ಕನಸು ಕಾಣಲಿಲ್ಲ, ಬ್ರಿಟಿಷರ ನಂತರ ನಮ್ಮ ದೇಶದಲ್ಲಿ ಶೋಷಣೆ ರಹಿತ ವ್ಯವಸ್ಥೆಯಾದ ಸಮಾಜವಾದವನ್ನು ಸ್ಥಾಪಿಸುವ ಕನಸು ಕಂಡವರು ಎಂದು ಎಐಡಿವೈಓ ನ ಜಿಲ್ಲಾ ಕಾರ್ಯದರ್ಶಿ ಈಶ್ವರ ಕೆ. ಹೇಳಿದರು.
ಶಹಾಬಾದ್ ನಗರದ ಬಸವೇಶ್ವರ ವೃತ್ತದಲ್ಲಿ ಎಐಡಿವೈಓ ಸ್ಥಳೀಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶಹೀದ್ ಭಗತ್ ಸಿಂಗ್ ಅವರ 94ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರಾಗಿ ಮಾತನಾಡಿದರು.
ದೇಶದಲ್ಲಿ ಮಾನವನಿಂದ ಮಾನವನ ಶೋಷಣೆ ಕೊನೆಗೊಂಡು ಎಲ್ಲರೂ ಶಿಕ್ಷಣ ಉದ್ಯೋಗ ಭದ್ರತೆ ಪಡೆಯುವಂತಾಗಲಿ ಎಂಬ ಕನಸನ್ನು ಭಗತ್ ಸಿಂಗ್ ಕಂಡರು. ಅಂತಹ ಒಂದು ಸಮಾಜವಾದಿ ಭಾರತದ ಕನಸನ್ನು ನನಸು ಮಾಡುವ ಜವಾಬ್ದಾರಿ ಇಂದು ನಮ್ಮ ಮೇಲಿದೆ. ಇಂದಿನ ಯುವಜನರು ಭಗತ್ ಸಿಂಗ್ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಇಂದು ಸಮಾಜದಲ್ಲಿ ಯುವಜನರು ಆನ್‍ಲೈನ್ ಗೆಮ್, ಅಶ್ಲೀಲ ಸಿನಿಮಾ-ಸಾಹಿತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಂಡವಾಳಶಾಹಿ ವ್ಯವಸ್ಥೆಯ ಆಳ್ವಿಕರು ಯುವಜನರ ಬೆನ್ನೆಲುಬು ಮುರಿಯುವ ಹುನ್ನಾರಗಳನ್ನು ಮಾಡುತ್ತಿದ್ದಾರೆ. ಯುವಜನರು ಜಾತಿ-ಧರ್ಮಗಳ ಮೂಲಕ ಒಡೆಯದೆ ಒಗ್ಗಟ್ಟಾಗಿ ಈ ವ್ಯವಸ್ಥೆಯನ್ನು, ಈ ಹುನ್ನಾರವನ್ನು ಸೋಲಿಸಬೇಕೆಂದು ಕರೆ ನೀಡಿದರು.
ಎಐಡಿವೈಓ ನ ಜಿಲ್ಲಾಧ್ಯಕ್ಷರಾದ ಎಸ್. ಎಸ್. ಜಗನ್ನಾಥ್ ಹಾಗೂ ಎಐಎಮ್‍ಎಸ್‍ಎಸ್ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷರಾದ ಗುಂಡಮ್ಮಾ ಮಡಿವಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಸಿದ್ದು ಚೌದ್ರಿ, ನಗರ ಅಧ್ಯಕ್ಷರಾದ ರಘು ಪವಾರ್, ಆನಂದ ದಂಡಗೂಲ್ಕರ, ದೇವರಾಜ್ ಮಿರಲ್ಕರ್, ಚಂದ್ರಕಾಂತ ದೇವಕರ್, ಕಿರಣ್ ಮಾನೆ, ಅಜಯ್ ದೊರೆ, ಮಾಳಿಂಗರಾಯ ಪೂಜಾರಿ, ಮಲ್ಲು ದೊರೆ ಪಲ್ಲವಿ ಗುರೂಜಲ್ಕರ್ ಸುಕನ್ಯಾ ಹುನುಗುಂಟಾ ಹಾಗೂ ಅನೇಕ ಯುವಕರು ಭಾಗವಹಿಸಿದ್ದರು.