ಕಲಬುರಗಿ: ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ಸ್ಥಾಪನೆಗೆ ಒತ್ತಾಯಿಸಿ ಧರಣಿ: ಹಲವರು ಪೊಲೀಸ್ ವಶಕ್ಕೆ
Update: 2024-11-01 11:12 IST

ಕಲಬುರಗಿ: ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕೆ ಒತ್ತಾಯಿಸಿ ಇಂದು ಬೆಳಗ್ಗೆ ನಗರದಲ್ಲಿ ಧರಣಿ ನಡೆಸಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲ್ಯಾಣ ಕರ್ನಾಟಕ ನಮ್ಮ ರಾಜ್ಯ ಎಂಬ ಘೋಷಣೆಯೊಂದಿಗೆ ಕೆಂಪು ಬಾವುಟ ಹಾರಿಸುವುದರ ಮೂಲಕ ಧರಣಿನಿರತರು ಒತ್ತಾಯಿಸಿದರು.
ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ, ರಸ್ತೆಗೆ ಇಳಿದಿದ್ದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎಂ.ಎಸ್. ಪಾಟೀಲ್ ನರಿಬೋಳ, ಲಕ್ಷ್ಮೀಕಾಂತ್ ಸ್ವಾಧಿ ಸೇರಿದಂತೆ ಸಮಿತಿಯ ಹಲವು ಪದಾಧಿಕಾರಿಗಳನ್ನು ವಶಕ್ಕೆ ಪಡೆದರು.




