ಕಲಬುರಗಿ | ಕೃಷಿ ಸಾಲ ಮಂಜೂರು ಮಾಡಿ, ರೈತರಿಗೆ ಸರಿಯಾಗಿ ಸ್ಪಂದಿಸಿ : ಭಂವರ್ ಸಿಂಗ್ ಮೀನಾ
ಕಲಬುರಗಿ : ದೇಶಕ್ಕೆ ಅನ್ನ ನೀಡುವ ರೈತ ಕೃಷಿ ಸಾಲ ಕೋರಿ ಬ್ಯಾಂಕಿಗೆ ಬಂದಲ್ಲಿ ಸರಿಯಾಗಿ ಸ್ಪಂದಿಸಿ ತ್ವರಿತಗತಿಯಲ್ಲಿ ಸಾಲ ಮಂಜೂರು ಮಾಡುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕರ್ಸ್ ಗಳಿಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೂಚನೆ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಸಮಾಲೋಚನಾ ಸಮಿತಿ (ಡಿ.ಸಿ.ಸಿ) ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿ.ಎಲ್.ಆರ್.ಸಿ) ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಆರ್ಥಿಕ ಅಭಿವೃಧ್ಧಿಯೇ ಬ್ಯಾಂಕುಗಳ ಪ್ರಮುಖ ಧ್ಯೇಯವಾಗಬೇಕು ಎಂದರು.
ಕೃಷಿ ಸೇರಿದಂತೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ವಿಸ್ತೀರ್ಣ ಹೆಚ್ಚಳಕ್ಕೆ ಉತ್ತೇಜಿಸುವ ನಿಟ್ಟಿನಲ್ಲಿ ತೋಟಗಾರಿಕೆ ಸಾಲವನ್ನು ಆದ್ಯತೆ ಮೇಲೆ ಮಂಜೂರು ಮಾಡಬೇಕು. ಬೆಳೆ ಸಾಲ ಬೆಂಬಲಿಸುವ ನಿಟ್ಟಿನಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಡಿಯಲ್ಲಿ ಬಾಕಿ ಇರುವ ಕೆ.ಸಿ.ಸಿ ಸಾಲಗಳನ್ನು ಕೂಡಲೆ ರೈತರಿಗೆ ಮಂಜೂರು ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಆರ್ಥಿಕ ಸಬಲೀಕರಣ ನಿಟ್ಟಿನಲ್ಲಿ ಸ್ವ-ಸಹಾಯ ಗುಂಪು (SHG) ಕ್ರೆಡಿಟ್ ಲಿಂಕ್ ಯೋಜನೆ ಸಾಕಾರ ಕುರಿತು ಸಭೆಯಲ್ಲಿ ಒತ್ತಿ ಹೇಳಿದ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು, ಬ್ಯಾಂಕುಗಳಲ್ಲಿ ಬಾಕಿ ಉಳಿದಿರುವ ಮಹಿಳಾ ಸ್ವಸಹಾಯ ಗುಂಪು ಸಾಲ ಕೂಡಲೆ ಮಂಜೂರು ಮಾಡಬೇಕಲ್ಲದೆ ಎಸ್.ಎಚ್.ಜಿ. ಯೋಜನೆಗಳನ್ನು ಎಲ್ಲಾ ಬ್ಯಾಂಕ್ಗಳು ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.
ವಿಮಾ ಯೋಜನೆ ಕುರಿತು ಅರಿವು ಮೂಡಿಸಿ :
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಕ್ರಮವಾಗಿ ಜೀವ ವಿಮೆ ಮತ್ತು ಆಕಸ್ಮಿಕ ವಿಮಾ ರಕ್ಷಣೆ ಹೊಂದಿದ್ದು, ಈ ಬಗ್ಗೆ ಬ್ಯಾಂಕ್ಗಳು ಹೆಚ್ಚಿನ ಪ್ರಚಾರ ನೀಡಿ ರೈತಾಪಿ ಸೇರಿದಂತೆ ಸಾರ್ವಜನಿಕರು ಯೋಜನೆಯ ಲಾಭ ಪಡೆಯಲು ಶ್ರಮಿಸುವಂತೆ ತಿಳಿಸಲಾಯಿತು.
ಎನ್.ಪಿ.ಸಿ.ಐ ಸಮಸ್ಯೆಗಳ ಬಗೆಹರಿಸಿ :
ತಡೆರಹಿತ ವಹಿವಾಟುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಬೆಳೆ ವಿಮಾ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮೆಯಾಗುವಂತೆ ಬಾಕಿ ಉಳಿದಿರುವ ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ (ಎನ್.ಪಿ.ಸಿ.ಐ) ತಾಂತ್ರಿಕ ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವಂತೆ ಬ್ಯಾಂಕರ್ಸ್ ಗಳಿಗೆ ಭಂವರ್ ಸಿಂಗ್ ಮೀನಾ ನಿರ್ದೇಶನ ನೀಡಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಎಫ್.ಐ.ಡಿ.ಡಿ.ಯ ಎಜಿಎಂ-ಎಲ್ಡಿಒ ಬುಬುಲ್, ನಬಾರ್ಡ್ ಬ್ಯಾಂಕಿನ ಡಿ.ಡಿ.ಎಂ ಲೋಹಿತ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಕುಮಾರ್ ಪಾಟೀಲ್ ಸೇರಿದಂತೆ ವಿವಿಧ ಬ್ಯಾಂಕ್ಗಳ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರೆ ಪಾಲುದಾರರು ಭಾಗವಹಿಸಿದ್ದರು.