ಕಲಬುರಗಿ | ಡಿ.21ರಂದು ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಸಮಸ್ಯೆ, ಸವಾಲುಗಳ ಕುರಿತು ವಿಚಾರ ಸಂಕಿರಣ : ಕೆ.ನೀಲಾ
ಕಲಬುರಗಿ : ನಗರದ ಕನ್ನಡ ಭವನದಲ್ಲಿ ಡಿ.21ರಂದು ಬೆಳಿಗ್ಗೆ 11 ಗಂಟೆಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ಸ್ವಾದಿ) ರಾಜ್ಯ ಸಮಿತಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ-ಸಮಸ್ಯೆ ಸವಾಲುಗಳು ಕುರಿತು ವಿಭಾಗೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ, ಹೋರಾಟಗಾರ್ತಿ ಕೆ. ನೀಲಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.29ರಿಂದ 31ರವರೆಗೆ ತುಮಕೂರಿನಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಪೂರ್ವಭಾವಿಯಾಗಿ ಕಲಬುರಗಿಯಲ್ಲಿ ವಿಭಾಗೀಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಮಹತ್ವದ ವಿಚಾರ ಸಂಕಿರಣದಲ್ಲಿ ಆರ್ಥಿಕ ತಜ್ಞ ಡಾ.ಟಿ.ಆರ್.ಚಂದ್ರಶೇಖರ್ ಹಾಗೂ ಹಿರಿಯ ಪತ್ರಕರ್ತ ಡಾ.ಎಸ್.ವೈ.ಗುರುಶಾಂತ್ ಅವರು ಪಾಲ್ಗೊಂಡು ವಿಷಯ ಮಂಡಿಸಲಿದ್ದು, ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರವು ನಿರ್ಧಿಷ್ಟ ಕಾರ್ಯ ಯೋಜನೆ ಹಾಕಿಕೊಳ್ಳಬೇಕು. ಆದರೆ ಹೀಗಾಗುತ್ತಿಲ್ಲ. ಹೀಗೆ ಅನೇಕ ಪ್ರಶ್ನೆಗಳು ಈ ಭಾಗದ ಜನರನ್ನು ಕಾಡುತ್ತಿವೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸಂವಿಧಾನದ ವಿಧಿ 371ಜೆ ಕಾಯ್ದೆಯ ತಿದ್ದುಪಡಿ ಮಾಡಿ ಜಾರಿಗೊಳಿಸಲಾಗಿದೆ. ಇದು ನಮ್ಮ ಭಾಗಕ್ಕೆ ಎಷ್ಟು ಪ್ರಯೋಜನವಾಗಿದೆ ಎಂಬುದು ಚರ್ಚೆಯಾಗಬೇಕಿದೆ ಎಂದು ಅವರು ತಿಳಿಸಿದರು.
ಡಾ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅನೇಕ ಶಿಫಾರಸುಗಳನ್ನು ಮಾಡಲಾಗಿದೆ. ಅವೆಲ್ಲವೂ ಜಾರಿಯಾಗಿವೆಯೇ ಎಂಬ ಪ್ರಶ್ನೆ ಇದೆ. ಇಲ್ಲಿಯ ಬಡತನ, ನಿರುದ್ಯೋಗ ತೊಡೆಯಲು ಸರಕಾರಕ್ಕೆ ರಾಜಕೀಯ ಇಚ್ಛಾಸಕ್ತಿಯ ಅಗತ್ಯವಿದೆ. ಈ ಎಲ್ಲ ಅಂಶಗಳನ್ನು ಚರ್ಚಿಸಲು ಡಿ. 21 ರಂದು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ್ ಬಿರಾದಾರ್, ಸುಧಾಮ್ ಧನ್ನಿ ಉಪಸ್ಥಿತರಿದ್ದರು.