ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು : ದೂರು ದಾಖಲು
ಕಲಬುರಗಿ : ಜಿಲ್ಲಾಸ್ಪತ್ರೆಯಲ್ಲಿ ಆಳಂದ ತಾಲ್ಲೂಕಿನ ಮಟಗಿ ಗ್ರಾಮದ ಬಾಣಂತಿ ಭಾಗ್ಯಶ್ರೀ ಶಿವಾಜಿ ಮುರಳಿ(23) ಮಂಗಳವಾರ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ʼಅಫಜಲಪುರ ಸರಕಾರಿ ಆಸ್ಪತ್ರೆಯ ವೈದ್ಯರು ಮಂಗಳವಾರ ಬೆಳಿಗ್ಗೆ ಕರ್ತವ್ಯಕ್ಕೆ ಗೈರಾಗಿ, ನರ್ಸ್ ಮೂಲಕ ಭಾಗ್ಯಶ್ರೀಗೆ ಹೆರಿಗೆ ಮಾಡಿಸಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡದಿರುವುದರಿಂದ ರಕ್ತದೊತ್ತಡ ಕುಸಿದು ರಕ್ತಸ್ರಾವವಾಗಿದೆ. ಬಳಿಕ ರೋಗಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದರು. ಅವರ ಸೂಚನೆ ಮೇರೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಲ್ಲಿನ ವೈದ್ಯರೂ ಸಹ ಸರಿಯಾಗಿ ಚಿಕಿತ್ಸೆ ಕೊಡದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಲೇ ಭಾಗ್ಯಶ್ರೀ ಸಾವನ್ನಪ್ಪಿದ್ದಾಳೆʼ ಎಂದು ಆರೋಪಿಸಿ ಮೃತ ಬಾಣಂತಿಯ ಪತಿ ಶಿವಾಜಿ ಅವರು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಿೆಚ್ಒ ಡಾ.ಶರಣಬಸಪ್ಪ ಕ್ಯಾತನಾಳ್, ಈ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ, ಈ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.