ಕಲಬುರಗಿ | ಜ.26ರಂದು ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ ಉದ್ಘಾಟನೆಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಸೂಚನೆ
ಕಲಬುರಗಿ : ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ತೆರೆಯಲಾಗಿರುವ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ ಸೋಮವಾರ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಭೇಟಿ ನೀಡಿ ಪರಿಶೀಲಿಸಿದರು.
ಜ.26 ರಂದು ತರಬೇತಿ ಶಾಲೆ ಉದ್ಘಾಟಿಸಲು ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಬಾಕಿ ಉಳಿದಿರುವ ಮೂಲಸೌಕರ್ಯ ಕೆಲಸ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ಅವರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಮೊದಲನೇ ಬ್ಯಾಚಿಗೆ ಆಯ್ಕೆಗೊಂಡು ತರಬೇತಿ ಪಡೆಯುತ್ತಿರುವ ಯುವಕರನ್ನು ಭೇಟಿ ಮಾಡಿದ ಅವರು, ಇಲ್ಲಿ ತರಬೇತಿ ಪಡೆದು ಆರ್ಮಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದರಲ್ಲದೆ ಉಚಿತ ವಸತಿ ಮತ್ತು ಗುಣಮಟ್ಟದ ಊಟ ಪೂರೈಕೆ ಬಗ್ಗೆ ಯುವಕರಿಂದ ಮಾಹಿತಿ ಪಡೆದುಕೊಂಡರು.
ಭಾರತೀಯ ಸೇನೆ/ ಇತರೆ ಯುನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಪೂರ್ವ ಸಿದ್ದತೆ ಮತ್ತು ವೃತ್ತಿ ಮಾರ್ಗದರ್ಶನ ನೀಡಲು ಇಲ್ಲಿ ತರಬೇತಿ ಶಾಲೆ ತೆರೆಯಲಾಗಿದೆ. ಪ್ರತಿ ಬ್ಯಾಚಿಗೆ 100 ಜನ ಯುವಕರನ್ನು ಆಯ್ಕೆ ಮಾಡಿ 4 ತಿಂಗಳ ಕಾಲ ದೇಹದಾರ್ಢ್ಯತೆ, ವೃತ್ತಿ ತರಬೇತಿ, ಸಫರ್ಧಾತ್ಮಕ ಪರೀಕ್ಷೆ ಕುರಿತು ಮಾಜಿ ಸೇನಾಧಿಕಾರಿಗಳು ಮತ್ತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ. ವರ್ಷಕ್ಕೆ 300 ಜನರನ್ನು ತರಬೇತಿ ನೀಡುವ ಗುರಿ ಹೊಂದಲಾಗಿದೆ. 10ನೇ ತರಗತಿ ಉತ್ತೀಣಗೊಂಡ 17 ರಿಂದ 20 ವಯೋಮಾನದ ಹಿಂದುಳಿದ ವರ್ಗಕ್ಕೆ ಸೇರಿದವರು ಇಲ್ಲಿ ಒಂದು ಸಲ ತರಬೇತಿ ಪಡೆಯಬಹುದಾಗಿದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಉಚಿತವಾಗಿ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಸೇನಾಧಿಕಾರಿಗಳಾದ ಶಿವಪುತ್ರಪ್ಪ, ರಾಚಪ್ಪ, ಸಂತೋಷ ಹಾಗೂ ಹಾಸ್ಟೆಲ್ ವಾರ್ಡನ್ ಅಶೋಕ ಇದ್ದರು.