ಕಲಬುರಗಿ | ಅಲ್ಪಸಂಖ್ಯಾತರ ಮಕ್ಕಳು ಶಾಲೆ ತೊರೆಯುವುದನ್ನು ತಪ್ಪಿಸಲು ಹೆಚ್ಚು ಮುತುವರ್ಜಿ ವಹಿಸಿ : ಯು.ನಿಸಾರ್ ಅಹ್ಮದ್

Update: 2025-01-13 14:03 GMT

ಕಲಬುರಗಿ: ಅಲ್ಪಸಂಖ್ಯಾತ ಸಮುದಾಯದಲ್ಲಿ ಅರಿವಿನ ಕೊರತೆಯಿಂದ ಅನಕ್ಷರತೆ ಹೆಚ್ಚಿದೆ. 2011ರ ಜನಗಣತಿ ಪ್ರಕಾರ ಶೇ.43.72 ಜನ ಅನಕ್ಷರತೆ ಹೊಂದಿದ್ದಾರೆ. ಅಲ್ಪಸಂಖ್ಯಾತ ಮಕ್ಕಳ ಶಾಲಾ ಡ್ರಾಪ್ ಔಟ್ ತಪ್ಪಿಸಿ ಅವರಿಗೆ ಪ್ರೌಢ ಶಿಕ್ಷಣ ಪೂರ್ಣವಾಗುವವರೆಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹ್ಮದ್ ಹೇಳಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಪ್ರವೇಶಾತಿಯಲ್ಲಿ ಸ್ಥಿರವಿಲ್ಲ. ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಶಿಕ್ಷಕರು ಮಾಡಬೇಕೆಂದರು.

ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಮುಸ್ಲೀಂ ಜನ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಅವಶ್ಯಕತೆ ಇದ್ದಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ವಕ್ಪ್ ಆಸ್ತಿಯನ್ನು ಲೀಸ್ ಅಥವಾ ಬಾಡಿಗೆ ರೂಪದಲ್ಲಿ ಪಡೆಯಬಹುದಾಗಿದೆ ಎಂದು ಯು.ನಿಸಾರ್ ಅಹ್ಮದ್ ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಸ್ಲೀಂ, ಕ್ರೈಸ್ತ, ಬೌದ್ಧ, ಸಿಖ್, ಜೈನ್ ಧರ್ಮದವರು ತುಂಬಾ ಕಡು ಬಡತನ ಹೊಂದಿದ್ದಾರೆ. ಇವರ ಜೀವನಮಟ್ಟ ಸುಧಾರಣೆಗೆ ಪ್ರಯತ್ನಿಸಬೇಕು, ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಜನಪರ ಯೋಜನೆಗಳು ಜಾರಿಗೊಳಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಆಯೋಗದ ವಿಶೇಷ ಅಧಿಕಾರಿ ಮುಜಿಬುಲ್ಲಾ ಜಫಾರಿ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಜಾವೀದ್ ಕರಂಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News