ಕಲಬುರಗಿ | ಸ್ಮಾರಕಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ: ಪ್ರೊ.ಎಸ್.ಎಸ್.ವಾಣಿ

Update: 2025-03-17 20:26 IST
ಕಲಬುರಗಿ | ಸ್ಮಾರಕಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ: ಪ್ರೊ.ಎಸ್.ಎಸ್.ವಾಣಿ
  • whatsapp icon

ಕಲಬುರಗಿ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು, ಸರಕಾರಿ ವಸ್ತು ಸಂಗ್ರಹಾಲಯ, ಕಲಬುರಗಿ ಹಾಗೂ ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ‘ಪರಂಪರೆ ಕೂಟದ ಉದ್ಘಾಟನೆ ಹಾಗೂ ಸ್ಮಾರಕಗಳ ಸ್ವಚ್ಛತಾ ಅಭಿಯಾನ’ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ಎಸ್.ಎಸ್. ವಾಣಿ ಮಾತನಾಡಿ, ಐತಿಹಾಸಿಕ ಸ್ಮಾರಕಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು, ಇವುಗಳು ನಮ್ಮ ಪರಂಪರೆಯ ಪ್ರತೀಕವಾಗಿವೆ ಎಂದು ತಿಳಿಸಿದರು.

ಈ ಸ್ಮಾರಕಗಳಿಗೆ ಇಲಾಖೆಯು ಕಂಪೌಂಡ್‌ ಗೋಡೆ ಹಾಗೂ ಭದ್ರವಾದ ಕಬ್ಬಿಣದ ಗೇಟು ಅಳವಡಿಸಿದೆ. ಆದರೂ ರಾತ್ರಿ 8 ಗಂಟೆಯಿಂದ 11 ಗಂಟೆಯ ಅವಧಿಯಲ್ಲಿ ಸುತ್ತಮುತ್ತಲಿನ ಯುವಕರು / ಮಾದಕ ದ್ರವ್ಯ ವ್ಯಸನಿಗಳು ಕಂಪೌಂಡ ಗೋಡೆಯನ್ನು ಹಾರಿ / ಗೇಟಿನ ಕೀಲಿ ಒಡೆದು ಸ್ಮಾರಕದ ಆವರಣದಲ್ಲಿ ಕುಳಿತು ಮಧ್ಯ ಮತ್ತು ಮಾದಕ ದ್ರವ್ಯಗಳ ಸೇವನೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಬಾಟಲ್‍ಗಳನ್ನು ಒಡೆದು ಹಾಕುವುದರ ಜೊತೆಗೆ ಗೋಡೆಯ ಅಂದವನ್ನು ಹಾಳು ಮಾಡಿದ್ದು, ಇದು ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿದೆ ಎಂದರು.

ರಾತ್ರಿ ವೇಳೆಯಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಅಸಾಧ್ಯವಾಗಿದೆ. ಸ್ಮಾರಕಗಳ ಸ್ವಚ್ಛತೆ, ಅವುಗಳ ಪ್ರಚಾರ ಮಾಡುವ ಒಂದು ವರ್ಗವಾದರೆ, ಅವುಗಳನ್ನು ಹಾಳು ಮಾಡುವ ಮತ್ತೊಂದು ವರ್ಗವಾಗಿದೆ. ಸ್ಮಾರಕಗಳ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ಮನೆಯವರು ತಮ್ಮ ಮನೆಯ ಕಸ-ಕಡ್ಡಿ, ಮಕ್ಕಳ ಮಲ-ಮೂತ್ರ ಹಾಗೂ ಇತರ ನಿರುಪಯುಕ್ತ ವಸ್ತುಗಳನ್ನು ಸ್ಮಾರಕದ ಕಂಪೌಂಡ್‌ ಒಳಗಡೆ ಎಸೆದು ಅವುಗಳನ್ನು ಹಾಳಿಗೆಡಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಸ್ಥಳೀಯರು ಇಂತಹ ಸ್ಮಾರಕಗಳನ್ನು ದುರುಪಯೋಗಪಡಿಸಿಕೊಳ್ಳದೆ ಅವುಗಳ ಸಂರಕ್ಷಣೆ ಮಾಡಬೇಕೆಂದರು.

ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಹಣಮಂತರಾಯ ಗುಡ್ಡೇವಾಡಿಯವರು ಮಾತನಾಡಿ, ಸ್ಮಾರಕಗಳನ್ನು ಸ್ಥಳೀಯ ಶಾಲಾ-ಕಾಲೇಜುಗಳ ಎನ್.ಎಸ್.ಎಸ್. ಘಟಕಗಳಿಗೆ ವಹಿಸಿಕೊಟ್ಟರೆ, ಅಲ್ಲಿ ನಿರಂತರವಾಗಿ ಸ್ವಚ್ಛಗೊಳಿಸುತ್ತ ಗಿಡ-ಮರಗಳನ್ನು ನಡೆಸುವುದರ ಮೂಲಕ ಸ್ಮಾರಕಗಳ ಸೌಂದರ್ಯವನ್ನು ಕಾಪಾಡಬಹುದು. ಇಂತಹ ಒಂದು ಯೋಜನೆಗೆ ಇಲಾಖೆಯು ಮುಂದಾಗಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಸರಕಾರಿ ವಸ್ತು ಸಂಗ್ರಹಾಲಯ ಸಹಾಯಕ ನಿರ್ದೇಶಕ ಡಾ.ರಾಜಾರಾಮ್ ಬಿ.ಸಿ. ಅವರು ಇಲಾಖೆಯು ಸ್ಮಾರಕಗಳ ಸಂರಕ್ಷಣೆಗೆ ಕೈಗೊಳ್ಳುತ್ತಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕನ್ನಡ ಪ್ರಾಧ್ಯಾಪಕರಾದ ಸಿದ್ಧರಾಮ ಅವರು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ವಿಜಯಲಕ್ಷ್ಮಿ ವಂದಿಸಿದ್ದರು. ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿಯ ಸದಸ್ಯರು, ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಹಾಜರಿದ್ದರು.

ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯ ಎನ್.ಎಸ್.ಎಸ್. ವಿದ್ಯಾರ್ಥಿನಿಯರು ಬಹಮನಿ ರಾಜ್ಯದ ಸ್ಥಾಪಕ ಅಲ್ಲಾವುದ್ದೀನ್ ಅಹಸನ್ ಗಂಗೂ ಬಹಮನ್ ಶಹಾನ ಸಮಾಧಿ ಹಾಗೂ ಎರಡನೆಯ ಮಹಮ್ಮದ್ ಶಹಾನ ಸಮಾಧಿಯ ಆವರಣಗಳನ್ನು ಸ್ವಚ್ಛಗೊಳಿಸುವಾಗ ಅವರಿಗೆ ನೂರಾರು ಸಂಖ್ಯೆಯ ಬೀರ್, ಬ್ರ್ಯಾಂಡಿ, ವ್ಹಿಸ್ಕಿ ಹಾಗೂ ಮಾದಕ ದ್ರವ್ಯಗಳ ಬಾಟಲ್ / ಪ್ಯಾಕೇಟ್‍ಗಳು ಸಿಕ್ಕಿದ್ದು, ಇವುಗಳನ್ನು ವಿದ್ಯಾರ್ಥಿನಿಯರು ಯಾವುದೇ ರೀತಿಯ ಸಂಕೋಚವಿಲ್ಲದೆ ಎಲ್ಲವುಗಳನ್ನು ತೆಗೆದುಹಾಕಿ ಸ್ಮಾರಕಗಳನ್ನು ಸ್ವಚ್ಛಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News