ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ| ರಾಜ್ಯ ಮಟ್ಟದ ಕವಿಗೋಷ್ಠಿ, ಅಂಬೇಡ್ಕರ್ ವಿಚಾರಧಾರೆ ಚಿಂತನೆ ಕಾರ್ಯಕ್ರಮ

ಕಲಬುರಗಿ: ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ರಾಜ್ಯ ಘಟಕ ಆಯೋಜಿಸಿದ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಅಂಬೇಡ್ಕರ ಅವರ ವಿಚಾರಧಾರೆ ಚಿಂತನೆ ಕಾರ್ಯಕ್ರಮ ನಡೆಯಿತು.
"ಕವಿ ಎಂಬವನು ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸುವವನು ಅಲ್ಲ, ಬದಲಾವಣೆಯ ದಾರಿ ತೋರುವ ದಾರಿ ದೀಪದಂತೆ ಕೂಡಾ. ಸಮಾಜದಲ್ಲಿ ಅಸಮಾನತೆ, ಅನ್ಯಾಯ ಮತ್ತು ಶೋಷಣೆಯನ್ನು ಎದುರಿಸುವ ಶಕ್ತಿಯುತವಾದ ಮಾತುಗಳು ಕವಿತೆಗಳ ಮೂಲಕ ವ್ಯಕ್ತವಾಗಬೇಕು" ಎಂದು ಜೇವರ್ಗಿಯ ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗಮೂರ್ತಿ ಶೀಲವಂತ ಅವರು ಹೇಳಿದರು.
ಕಲಬುರಗಿಯ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ರಾಜ್ಯ ಘಟಕ ಆಯೋಜಿಸಿದ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಅಂಬೇಡ್ಕರ ಅವರ ವಿಚಾರಧಾರೆ ಚಿಂತನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಸ್ವಾತಂತ್ರ‍್ಯ, ಸಮಾನತೆ ಮತ್ತು ಸಹೋದರತ್ವದ ತತ್ವಗಳು ಯಾವತ್ತೂ ನಶಿಸದು. ಇಂದಿನ ಯುವ ಜನಾಂಗ ಈ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾನತೆಯ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.
ಇಂದು ಕಾವ್ಯ ಮತ್ತು ಸಾಹಿತ್ಯದ ಪ್ರಭಾವವನ್ನು ಯುವಕರು ಅರಿತುಕೊಂಡು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸುವ ಜವಾಬ್ದಾರಿ ಅವರ ಮೇಲಿದೆ. ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯ ಮೂಲಕ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ನಾವು ಪ್ರತಿಯೊಬ್ಬರೂ ಸಹಕರಿಸಬೇಕಿದೆ ಎಂದು ನಾಗಮೂರ್ತಿ ಶೀಲವಂತ ಅವರು ಕರೆ ನೀಡಿದರು.
"ಸಮಾಜದ ಶ್ರೇಣೀಕರಣವನ್ನು ನಿರ್ಮೂಲಗೊಳಿಸಲು ಕಾವ್ಯ, ಸಾಹಿತ್ಯ ಮತ್ತು ಬೋಧನೆ ಎಂಬ ಮೂರು ಅಸ್ತ್ರಗಳ ಜಾಣ್ಮೆಯಿಂದ ಬಳಸಬೇಕು" ಕಾವ್ಯ ಮತ್ತು ಸಾಮಾಜಿಕ ಚಿಂತನೆಯ ಒಕ್ಕೂಟವಿಲ್ಲದೆ ಪರಿವರ್ತನೆಯ ಶಕ್ತಿಯು ದುರ್ಬಲಗೊಳ್ಳುತ್ತದೆ ಹೇಳಿದರು.
ಸಮ್ಮೇಳಣನವನ್ನು ಕಲಬುರಗಿ ಪಿಡಬ್ಲೂಡಿ ಅಧೀಕ್ಷಕ ಅಭಿಯಂತರ ಡಾ. ಸುರೇಶ್ ಎಲ್. ಶರ್ಮಾ ಉದ್ಘಾಟಿಸಿದರು. ಡಿಎಚ್‌ಒ ಡಾ. ಶರಣಬಸಪ್ಪ ಕ್ಯಾತನಳ, ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮರೇಶ್ವರ ಬಿ. ಚಿಂಚನಸೂರ್, ಕೆಎಸ್‌ಎಸ್‌ಡಿ ಅಧ್ಯಕ್ಷ ಸಂಜೀವ್ ಟಿ. ಮಾಲೆ ಹಿರಿಯ ಕವಿ, ಪ್ರಕಾಶಕ, ಧರ್ಮಣ್ಣ ಎಚ್. ಧನ್ನಿ ಉಪಸ್ಥಿತರಿದ್ದರು.
ಈ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಒಟ್ಟು 107 ಕವಿಗಳು ಭಾಗವಹಿಸಿ, ತಮ್ಮ ಸಾಹಿತ್ಯಿಕ ಪ್ರತಿಭೆಯನ್ನು ಪ್ರದರ್ಶಿಸಿದರು. ಹಿರಿಯ ಕವಿ ಸಂತೋಷ ವೇದಪಾಠಕ, ಸುಭಾಷ ಮೋಘಾ, ರಾಜಶೇಖರ ಕಡಗನ, ಪ್ರಬುದ್ಧ ಕಡಗನ, ಪ್ರಭಾಕರ ಕಡಗನ, ಡಾ. ಸುಖದೇವಿ ಘಂಟೆ, ಶ್ರೀಶೈಲ ಮಾಡ್ಯಾಳೆ ಸರಸಂಬಾ, ಮಲ್ಲಿಕಾರ್ಜುನ ಜುಬ್ರೆ, ಅಂಬಾರಾಯ ಕಾಂಬಳೆ, ಡಾ. ಅವಿನಾಶ ದೇವನೂರ, ಅಮೃತ ಮುನೋಳಿ ಸೇರಿದಂತೆ ಅನೇಕ ಗಣ್ಯ ಕವಿಗಳು ಭಾಗವಹಿಸಿ ಅಂಬೇಡ್ಕರ್ ತತ್ವ, ಸಮಾಜ ಸುಧಾರಣೆ, ಸಮಾನತೆ ಮತ್ತು ನ್ಯಾಯದ ಪರಿಕಲ್ಪನೆಗಳನ್ನು ಕಾವ್ಯಮಯವಾಗಿ ವ್ಯಕ್ತಪಡಿಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಗುರುಪಾದ ಕೋಗನೂರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಕರೆಡ್ಡಿ, ಕೋಶಾಧ್ಯಕ್ಷರು ಝಾಕಿರ್ ಹುಸೇನ್ ಕುಪನೂರ, ಸಹಕಾರದರ್ಶಿ ಮೈಲಾರಲಿಂಗ ರಾಜೇಂದ್ರ ಕೊರಬಾ ಇದ್ದರು. ರವಿಕುಮಾರ್ ಹೂಗಾರ್ ನಿರೂಪಿಸಿದರು. ವೆಂಕಟರೆಡ್ಡಿ ಸ್ವಾಗತಿಸಿದರು. ಜಾಕಿರ್ ಹುಸೇನ್ ವಂದಿಸಿದರು.