ಕಲಬುರಗಿ | ʼಕೊಲೆʼ ದೃಶ್ಯ ಚಿತ್ರೀಕರಣದ ವಿಡಿಯೋ ವೈರಲ್: ಇಬ್ಬರ ಬಂಧನ

Update: 2025-03-18 23:45 IST
ಕಲಬುರಗಿ | ʼಕೊಲೆʼ ದೃಶ್ಯ ಚಿತ್ರೀಕರಣದ ವಿಡಿಯೋ ವೈರಲ್: ಇಬ್ಬರ ಬಂಧನ

ಬಂಧಿತ ಆರೋಪಿಗಳು

  • whatsapp icon

ಕಲಬುರಗಿ : ಕಿರುಚಿತ್ರಕ್ಕಾಗಿ ತಡರಾತ್ರಿ ನಗರದ ಪ್ರಮುಖ ರಸ್ತೆಯೊಂದರ ಮೇಲೆ ಭೀಕರ ಕೊಲೆಯ ವಿಡಿಯೋ ಚಿತ್ರಿಕರಣ ಮಾಡಿ ವೈರಲ್ ಮಾಡಿರುವ ಇಬ್ಬರು ಪಾತ್ರಧಾರಿಗಳನ್ನು ಕಲಬುರಗಿ ಸಬ್ ಅರ್ಬನ್ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ.

ನಗರದ ಸಿದ್ದೇಶ್ವರ ಕಾಲೋನಿಯ ನಿವಾಸಿ ಆಟೋ ಚಾಲಕ ಸಾಯಿಬಣ್ಣ ಬೆಳಗುಂಪಿ (27) ಮತ್ತು ‌ಕೆಕೆ ನಗರದ ನಿವಾಸಿ ಸಚೀನ್ ಸಿಂದೆ (26) ವಿಡಿಯೋ ಚಿತ್ರಿಕರಣ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಬಿಟ್ಟ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ :

ಸಚಿನ್ ಹಾಗೂ ಸಾಯಬಣ್ಣ ಇಬ್ಬರು ಸೇರಿಕೊಂಡು 'ಮೆಂಟಲ್ ಮಜನು' ಎಂಬ ಹೆಸರಿನ ಕಿರುಚಿತ್ರ ಮಾಡುತ್ತಿದ್ದು, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯರಿಗೆ ಮಾಹಿತಿ ತಿಳಿಸದೇ ಸೋಮವಾರ ತಡರಾತ್ರಿ ಕಲಬುರಗಿ ನಗರದ ಹುಮನಾಬಾದ ರಿಂಗ್ ರಸ್ತೆಯ ನಡು ರಸ್ತೆಯಲ್ಲಿ ಪಾತ್ರಧಾರಿ ಸಚಿನ್ ಮತ್ತು ಸಾಯಬಣ್ಣ ರಕ್ತದ ಮಾದರಿಯಲ್ಲಿ ಕೆಂಪು ಬಣ್ಣವೊಂದನ್ನು ಹಚ್ಚಿಕೊಂಡು ಅರೆ ಬೆತ್ತಲೆಯಾಗಿ ರಕ್ತಸಿಕ್ತ ದೇಹದ ಮೇಲೆ ಕುಳಿತು ವ್ಯಕ್ತಿಯೊಬ್ಬ ಕೈಯಲ್ಲಿ ಕಬ್ಬಿಣದ ಹತೋಡಿ ಹಿಡಿದುಕೊಂಡು ಭೀಕರವಾಗಿ ಕೊಲೆ ಮಾಡಿ ಜೋರಾಗಿ ಕೂಗಾಡುವ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.

ಚಿತ್ರೀಕರಿಸಿದ ಭೀಕರ ಕೊಲೆಯ ವಿಡಿಯೋ ರಾತ್ರೋ ರಾತ್ರಿ ಎಲ್ಲೆಡೆ ಹರಿದಾಡಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಬ್ ಆರ್ಬನ್ ಪೊಲೀಸರು ಅಲರ್ಟ್ ಆಗಿ ಇಬ್ಬರನ್ನು ಪತ್ತೆ ಹಚ್ಚಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News