ಕಲಬುರಗಿ | ರೈತ ಹೋರಾಟಗಾರರ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಶೀಘ್ರ ಅಸ್ತಿತ್ವಕ್ಕೆ : ಕೂಡಿಹಳ್ಳಿ

Update: 2025-03-18 20:26 IST
Photo of Press meet
  • whatsapp icon

ಕಲಬುರಗಿ : ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿಯಿಂದ ಯಾವುದೇ ಹಂತದಲ್ಲೂ ರಾಜ್ಯದ ಜನಸಾಮಾನ್ಯರು ಸೇರಿದಂತೆ ರೈತರು, ಕೂಲಿಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ದಾರಿ ನಾವೇ ಹುಡುಕಿಕೊಂಡು ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೀಘ್ರವೇ ಪ್ರಾದೇಶಿಕ ಪಕ್ಷವೊಂದನ್ನು ಅಸ್ತಿತ್ವಕ್ಕೆ ತರುವ ಜಾಗೃತಿ ನಡೆಯುತ್ತಿದೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ನವ ಕರ್ನಾಟಕ ನಿರ್ಮಾಣ ಆಂದೋಲನ ಎನ್ನುವ ಹೆಸರಿನಲ್ಲಿ ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಭಾಷಾ ಚಳುವಳಿ, ಮಹಿಳಾ ಚಳುವಳಿ, ವಿದ್ಯಾರ್ಥಿ ಯುವಜನರ ಚಳುವಳಿಗಳು ರೂಪಿಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಮುನ್ನೋಟವನ್ನು ಜನರ ಮುಂದೆ ಇಡುವ ನಿಟ್ಟಿನಲ್ಲಿ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಮಂಗಳವಾರ ಕನ್ನಡ ಭವನದಲ್ಲಿ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ನಡೆಸಲಾಗುತ್ತಿದೆ. ಈ ಚರ್ಚೆಯ ಬಳಿಕ ಇನ್ನಷ್ಟು ಜಿಲ್ಲೆಗಳಲ್ಲಿ ಜಲ ಜಾಗೃತಿ ಆಂದೋಲನ ನಡೆದ ಬಳಿಕ ಅಂತಿಮ ರೂಪ ಪಡೆಯಲಿದೆ ಎಂದರು.

ರಾಜ್ಯದಲ್ಲಿ ಈಗ ಜಾರಿಯಲ್ಲಿರುವ ಲ್ಯಾಂಡ್ ಅಕ್ವಿಜೇಶನ್ ಬಿಲ್ ವಾಪಸ್ ಪಡೆಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಇದಲ್ಲದೆ ಕೇಂದ್ರದ ಭಾಷಾ ನೀತಿಯನ್ನು ತಿನ್ನಲು ಕೂಡ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವಲ್ಲಿ ಡಿ.ಕೆ.ಶಿವಕುಮಾರ್ ಕೂಡ ವಿಫಲರಾಗಿದ್ದು, ಇಂಥವರಿಂದ ರೈತ ಹಾಗೂ ಕೂಲಿ ಕಾರ್ಮಿಕರ ರಕ್ಷಣೆ ಅಸಾಧ್ಯ ಎಂದರು.

ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕೆಐಡಿಬಿ ಎನ್ನು ಉಳಿಸಿಕೊಂಡು ರೈತರ ಜಮೀನನ್ನು ಕೈಗಾರಿಕೆ ಹೆಸರಿನಲ್ಲಿ ಸ್ವಾಧೀನ ಮಾಡಿಕೊಂಡು ಪರಭಾರೆ ಮಾಡಿರುವುದು ಹೆಗ್ಗಳಿಕೆ ಎಂದರು.

ಕೂಡಲೇ ರಾಜ್ಯದಲ್ಲಿ ಕೆಐಡಿಬಿಯನ್ನು ಮುಚ್ಚಬೇಕು ಅಲ್ಲದೆ, ರೈತರ ಹಿತ ಕಾಯುವ ನಿಟ್ಟಿನಲ್ಲಿ ತೊಗರಿ ಸೋಯಾ ರಾಗಿ ಭತ್ತ ಖರೀದಿಗಾಗಿ ಆವರ್ತ ನಿಧಿಯನ್ನು ಸ್ಥಾಪಿಸಬೇಕು, ನೇಟೆ ರೋಗದಿಂದ ಸಂಕಷ್ಟಕ್ಕೊಳಗಾಗಿರುವ ಕಲಬುರಗಿ ಭಾಗದ ತೊಗರಿ ರೈತರಿಗೆ ಕೂಡಲೇ ಬೆಳೆ ವಿಮೆ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಆರ್.ಮುನಿಯಪ್ಪ, ಗೋಪಿನಾಥ, ಮೋಹನರಾಜ್, ಪುಟ್ಟರಾಜ್, ಮಲ್ಲಣ್ಣಗೌಡ, ಕೆ.ಬಿ.ವಾಸು, ದಸ್ತಗೀರಗ ಮುಲ್ಲಾ, ಮಲ್ಲಿಕಾರ್ಜುನ ನೆಲೋಗಿ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News