ಆಳಂದ ತಾಲ್ಲೂಕಿನಲ್ಲಿ 35 ಕೋಟಿ ರೂ. ನರೇಗಾ ಅವ್ಯವಹಾರ ಆರೋಪ : ಲೋಕಾಯುಕ್ತ ತನಿಖೆಗೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಒತ್ತಾಯ

ಕಲಬುರ ಗಿ: ಆಳಂದ ತಾಲೂಕಿನಲ್ಲಿ ನರೇಗಾ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಅಡಿಯಲ್ಲಿ 35 ಕೋಟಿ ರೂ. ಮೊತ್ತದ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಎರಡು ದಿನಗಳ ಒಳಗೆ ಲೋಕಾಯುಕ್ತ ಮತ್ತು ರಾಜ್ಯದ ಆಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಹೇಳಿದರು.
ಆಳಂದ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎಲ್ಲಾ ಕಾಮಗಾರಿಗಳ ಅವ್ಯವಹಾರದ ಹಿಂದೇ ಶಾಸಕರ ಕುಮಕ್ಕಿನಿಂದ ಅವರ ಸಹೋದರ ಪುತ್ರ ಆರ್.ಕೆ.ಪಾಟೀಲ್ ತಮ್ಮ ಹಿಂಬಾಲಕರ ಮೂಲಕ ಅವ್ಯವಹಾರ ಎಸಗಿದ್ದಾರೆ. ಈ ಕುರಿತು ಸಮಗ್ರವಾಗಿ ತನಿಖೆಯಾಗಬೇಕು. ನೈಜ್ಯ ಕಾರ್ಮಿಕರಿಗೆ ಕೆಲಸ ದೊರೆಯಬೇಕು. ವೈಜ್ಞಾನಿಕ ಕಾಮಗಾರಿಳು ನಡೆಯಬೇಕು ಎಂದು ಒತ್ತಾಯಿಸಿದರು.
ನಕಲಿ ಕೂಲಿ ಕಾರ್ಮಿಕರ ಹೆಸರಿನಲ್ಲಿ ಹಣ ಲೂಟಿ :
ನರೇಗಾ ಯೋಜನೆಯಡಿ 467 ತೆರೆದ ಬಾವಿಗಳ ಕಾಮಗಾರಿಗಳು ಮಂಜೂರಾಗಿದ್ದರೂ, ಯಂತ್ರಗಳ ಬಳಕೆ ಮಾಡಿ ನಕಲಿ ಕೂಲಿ ಕಾರ್ಮಿಕರ ಹೆಸರಿನಲ್ಲಿ ಹಣ ವಂಚನೆ ಮಾಡಲಾಗಿದೆ ಎಂದು ಗುತ್ತೇದಾರ ಆರೋಪಿಸಿದರು.
ಈ ಅವ್ಯವಹಾರದಲ್ಲಿ ಅಧಿಕಾರಿಗಳು ಮತ್ತು ಶಾಸಕರ ಬೆಂಬಲಿಗರು ಭಾಗಿಯಾಗಿದ್ದಾರೆ ಎಂದು ಹೇಳಿದರು.
ಯೋಜನೆಯ ನಿಯಮಗಳಿಗೆ ತಿರುಗುಬಾಣ :
ಜೆಸಿಬಿ ಯಂತ್ರ ಬಳಕೆ ಮಾಡಲಾಗಿದೆ. ಬಾವಿ ಕೊರೆತ ಕಾರ್ಯದಲ್ಲಿ ಕೈಕೆಲಸದ ಕೂಲಿ ಕಾರ್ಮಿಕರನ್ನು ಬಳಸಬೇಕಾಗಿತ್ತು. ಆದರೆ ನಿಯಮಗಳನ್ನು ಮೀರಿ ಜೆಸಿಬಿ ಯಂತ್ರಗಳ ಬಳಕೆ ಮೂಲಕ ಸರ್ಕಾರದ ಹಣ ಲೂಟಿ ಮಾಡಲಾಗಿದೆ. ವಿದೇಶ ಮತ್ತು ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿರುವ, ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ಕಾಲೇಜು ವಿದ್ಯಾರ್ಥಿಗಳ ಹೆಸರನ್ನು ಜಾಬ್ ಕಾರ್ಡ್ ಗಳಲ್ಲಿ ಸೇರಿಸಿ ಹಣ ವಂಚನೆ ಮಾಡಲಾಗಿದೆ.
ಸುಳ್ಳು ಎನ್‌ಎಂಆರ್ (ನಾಮಿನಲ್ ಮಸ್ಟರ್ ರೋಲ್): ಕೂಲಿ ಕಾರ್ಮಿಕರು ಕೆಲಸ ಮಾಡಿಲ್ಲವಾದರೂ, ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಹಣ ವಂಚಿಸಲಾಗಿದೆ ಎಂದರು.
ರಾಜಕೀಯ ಪ್ರಭಾವ :
ಶಾಸಕರ ಸಹೋದರನ ಪುತ್ರನ ಸೂಚನೆಯಂತೆ ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗುತ್ತೇದಾರ ಆರೋಪಿಸಿದರು.
ಅಧಿಕಾರಿಗಳಿಗೆ ಎಚ್ಚರಿಕೆ–ಲೋಕಾಯುಕ್ತರಿಗೆ ದೂರು :
ಈ ಕುರಿತು ಈಗಾಗಲೇ ಜಿಪಂ ಸಿಇಒಗೆ ದೂರು ನೀಡಲಾಗಿದ್ದು, ಒಂದು ವಾರದೊಳಗೆ ಕ್ರಮ ಕೈಗೊಳ್ಳುವಂತೆ ಗಡವು ನೀಡಲಾಗಿದೆೆ. ಅದಲ್ಲದೆ, ರಾಜ್ಯದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಿಗೆ ದೂರು ನೀಡಲಾಗುತ್ತಿದೆ ಎಂದು ಹೇಳಿದರು.
ಈ ಭಾರೀ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುತ್ತಿದೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆoದರೆ, ಕೂಲಿ ಕಾರ್ಮಿಕರೊಂದಿಗೆ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಗುತ್ತೇದಾರ ಎಚ್ಚರಿಕೆ ನೀಡಿದ್ದಾರೆ.