ಕಲಬುರಗಿ | ಮಂಗಳಮುಖಿ ಮೇಲೆ ಹಲ್ಲೆ ಪ್ರಕರಣ; ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಕಲಬುರಗಿ : ಇತ್ತೀಚೆಗೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಳಿ ಅಂಕಿತ ಎಂಬ ಮಂಗಳಮುಖಿಯನ್ನು ಬೆತ್ತಲೆಗೊಳಿಸಿ, ತಲೆ ಬೋಳಿಸಿ ಹಲ್ಲೆ ನಡೆಸಲಾಗಿದೆ. ಮಂಗಳಮುಖಿಯರಿಂದಲೇ ಮಂಗಳಮುಖಿಯ ಮೇಲೆ ಈ ಒಂದು ಹಲ್ಲೆ ನಡೆದಿರುವುದು ತೀವ್ರ ಖಂಡನೀಯ ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ರಾಜ್ಯ ಸಹಾಧ್ಯಕ್ಷೆ ವೈಶಾಲಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶೀಲಾ, ಮಾಲಾ, ಭವಾನಿ ಸೇರಿ ಆರು ಜನ ಮಂಗಳಮುಖಿಯರಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡಿರುವರು ನಮ್ಮ ಸಮುದಾಯದವರು ಆದರೂ ಕೂಡ ಯಾರು ತಪ್ಪಿತಸ್ಥರು ಇದ್ದಾರೆ ಅವರನ್ನು ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಟ್ರಾನ್ಸ್ ಜೆಂಡರ್ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯ ಮಾಡಿದರು.
ಕಳೆದ ಒಂದು ವರ್ಷದಲ್ಲಿ ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ಮೈಸೂರು ನಗರದಲ್ಲಿ ಇಂತಹ ಘಟನೆಗಳು ನಡೆದರು. ಯಾವುದೇ ಒಬ್ಬ ಅಪರಾಧಿಗಳಿಗೆ ಶಿಕ್ಷೆಯಾಗಿರುವುದಿಲ್ಲ, ಪೊಲೀಸ್ ಇಲಾಖೆ ಇಂತಹ ಘಟನೆಗಳ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ? ಪೊಲೀಸ್ ಇಲಾಖೆ ಕರ್ತವ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಕಿತಾ, ಸೋನಾಲಿ, ಅನುಷಾ ಹಿರೇಮಠ ಸೇರಿದಂತೆ ಇತರರು ಇದ್ದರು.