ಕಲಬುರಗಿ | ಕಳವಾದ 128 ಮೊಬೈಲ್ ವಾರಸುದಾರರಿಗೆ ಹಸ್ತಾಂತರ : ಎಸ್ಪಿ ಅಡ್ಡೂರು ಶ್ರೀನಿವಾಸಲು

ಕಲಬುರಗಿ : ಕಲಬುರಗಿ ಜಿಲ್ಲೆಯ 4 ಉಪ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿರುವ ನಾನಾ ಕಂಪನಿಗಳ 17,49,000 ರೂ. ಮೌಲ್ಯದ 128 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್ 2024ರಿಂದ ಫೆಬ್ರವರಿ 2025ರವರೆಗೆ ಕಲಬುರಗಿ ಜಿಲ್ಲಾ ಸೆನ್ ಪೊಲೀಸ್ ಠಾಣೆಯಿಂದ 55 ಮೊಬೈಲ್‌ಗಳು, ಶಹಬಾದ್ ಉಪ ವಿಭಾಗದಿಂದ 55 ಮೊಬೈಲ್‌ಗಳು, ಚಿಂಚೋಳಿ ಉಪ ವಿಭಾಗದಿಂದ 8 ಮೊಬೈಲ್‌ಗಳು, ಆಳಂದ ಉಪ ವಿಭಾಗದಿಂದ 10 ಮೊಬೈಲ್‌ಗಳು ಹೀಗೆ ಒಟ್ಟು 128 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆಂದು ತಿಳಿಸಿದರು.
ಕಳೆದ ವರ್ಷ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸಿಇಐ(CEIR Portal) ಪೋರ್ಟಲ್ ನಲ್ಲಿ ಒಟ್ಟು 3,540 ಮೊಬೈಲ್ ಕಳೆದುಕೊಂಡಿರುವ ಪ್ರಕರಣಗಳು ದಾಖಲಾಗಿದ್ದು, ಇದರ ಪೈಕಿ ಈಗಾಗಲೇ 1,092 ಮೊಬೈಲ್ ಗಳನ್ನು ರಿಕವರಿ ಮಾಡಲಾಗಿದೆ. ಇನ್ನೂ ಉಳಿದ 1,050 ಮೊಬೈಲ್ ಗಳನ್ನು ಟ್ರೆಸ್ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಕು, ಇಲ್ಲವೇ ಸಿಇಐಆರ್ ಪೋರ್ಟಲ್ ನಲ್ಲಿ ಆನ್‌ಲೈನ್ ನಲ್ಲಿ ಸಹ ದೂರು ದಾಖಲಿಸಬಹುದು. ದೂರು ನೀಡಿದಲ್ಲಿ ತಕ್ಷಣವೇ ಕಳೆದು ಹೋದ ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ನಾಲ್ಕು ಉಪವಿಭಾಗದ ಪಿಐ ಹಾಗೂ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಎಸ್ಪಿ, ಹೆಚ್ಚವರಿ ಎಸ್ಪಿ ಮಹೇಶ ಮೇಘಣ್ಣ ನವರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಡಿಎಸ್ಪಿ ಸಂಗಮನಾಥ ಹಿರೇಮಠ, ಶಹಬಾದ ಉಪ ವಿಭಾಗದ ಡಿಎಸ್ಪಿ ಶಂಕರಗೌಡ ಪಾಟೀಲ್, ಆಳಂದ ಉಪ ವಿಭಾಗದ ಡಿಎಸ್ಪಿ ಗೋಪಿ ಡಿ.ಎಸ್ ಸೇರಿದಂತೆ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.