ಕಲಬುರಗಿ | ಮಾ.19 ರಂದು ಶರಣಬಸವೇಶ್ವರ ಯಾತ್ರೆ, ಮಹಾರಥೋತ್ಸವ

ಕಲಬುರಗಿ : ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಮತ್ತು ಐತಿಹಾಸಿಕ ದೇವಸ್ಥಾನವಾಗಿರುವ ದಾಸೋಹ ಪರಂಪರೆಯ ಶ್ರೀ ಶರಣಬಸವೇಶ್ವರರ 203ನೇ ಯಾತ್ರೆ ಮತ್ತು ಮಹಾ ರಥೋತ್ಸವವು ಮಾ.19 ರಂದು ನಡೆಯಲಿದೆ ಎಂದು ಶರಣಬಸವೇಶ್ವರ ಸoಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹೇಳಿದರು.
ನಗರದ ದಾಸೋಹ ಮಹಾಮನೆಯ ಆವರಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪವಿತ್ರ ದಿನದಂದು ಮಹಾದಾಸೋಹ ಪೀಠಾಧಿಪತಿಗಳ 203 ನೇ ಪವಿತ್ರ ಪೀಠಾರೋಹಣವನ್ನು ಸ್ಮರಿಸುತ್ತದೆ. ಮಹಾರಥೋತ್ಸವಕ್ಕೆ ಮುಂಚಿತವಾಗಿ ಉಚ್ಚಾಯಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಣ್ಣ ರಥವನ್ನು ನಾಳೆ(ಮಂಗಳವಾರ) ಎಳೆಯಲಾಗುತ್ತದೆ. ದೇಶ ಮತ್ತು ವಿದೇಶಗಳಿಂದ ಬರುವ ಕೋಟ್ಯಂತರ ಭಕ್ತರು ಶರಣಬಸವೇಶ್ವರ ದೇವಾಲಯ ಸಂಕೀರ್ಣದಲ್ಲಿ ಶರಣರು ಬಳಸುತ್ತಿದ್ದ ಬೆಳ್ಳಿ ತಟ್ಟೆ (ಪ್ರಸಾದ ಬಟ್ಟಲು) ಪ್ರದರ್ಶಿಸಿ, ಮಹಾರಥೋತ್ಸವಕ್ಕೆ ಪೂಜ್ಯ 8ನೇ ಮತ್ತು 9ನೇ ಪೀಠಾಧಿಪತಿಗಳು ಚಾಲನೆ ನೀಡಲಿದ್ದು, ಇದೇ ವೇಳೆ "ಲಿಂಗ ಸಜ್ಜಿಕೆ" (ಲಿಂಗವನ್ನು ಉಳಿಸಿಕೊಳ್ಳಲು ಶ್ರೀ ಶರಣಬಸವೇಶ್ವರರು ಬಳಸಿದ ಶುದ್ಧ ಶ್ರೀಗಂಧದ ಮರದಿಂದ ಮಾಡಿದ ಪೆಟ್ಟಿಗೆ) ಯ ಒಂದು ನೋಟವನ್ನು ಪಡೆಯುವ ಅವಕಾಶವೂ ಭಕ್ತರಿಗೆ ಸಿಗುತ್ತದೆ ಎಂದರು.
ವಾರ್ಷಿಕ ಯಾತ್ರೆ ಮತ್ತು ರಥೋತ್ಸವದ ನಿಮಿತ್ತ ಪೂಜ್ಯ ಡಾ.ಅಪ್ಪಾಜಿ ಅವರು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ನಾಲ್ವಾರದಲ್ಲಿರುವ ಕೋರಿ ಸಿದ್ದೇಶ್ವರ ಮಠದ ಡಾ.ಸಿದ್ದ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಅವರಿಗೆ ಈ ವರ್ಷದ ಪ್ರತಿಷ್ಠಿತ 'ಅಪ್ಪ ಪ್ರಶಸ್ತಿ' ಮತ್ತು ಸಮಾಜಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರಿಗೆ 'ದಾಸೋಹ ಜ್ಞಾನ ರತ್ನ' ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು ತಲಾ 51,000 ರೂ. ನಗದು ಮತ್ತು ಫಲಕ, ಪ್ರಶಂಸಾ ಪತ್ರವನ್ನು ಹೊಂದಿದೆ ಎಂದು ಡಾ.ಅವ್ವಾಜಿ ಹೇಳಿದರು.
ರಥೋತ್ಸವದ ಭಾಗವಾಗಿ ಸಂಸ್ಥಾನದ 7ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ, 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಮತ್ತು ಸಮಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರ ಜೀವನದ ವಿವಿಧ ಆಯಾಮಗಳ ಕುರಿತು ಮೂರು ಪುಸ್ತಕಗಳನ್ನು ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಶರಣಬಸವೇಶ್ವರ ವಿದ್ಯಾ ವರ್ಧನ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್ ಹೇಳಿದರು.
ಶ್ರೀ ಶರಣಬಸವೇಶ್ವರರ ಜೀವನ ಮತ್ತು ಕಾಲದ ಕುರಿತಾದ ನಾಟಕವನ್ನು ಮೂರು ದಿನಗಳವರೆಗೆ ಅಂದರೆ, ಯುಗಾದಿಯ ಹಿಂದಿನ ಒಂದು ದಿನ, ಯುಗಾದಿಯ ದಿನದಂದು ಮತ್ತು ಯುಗಾದಿಯ ನಂತರದ ಒಂದು ದಿನ ಪ್ರದರ್ಶಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 9ನೇ ಪೀಠಾಧಿಪತಿ ಚಿ.ಪೂಜ್ಯ ದೊಡ್ಡಪ್ಪ ಅಪ್ಪಾಜಿ, ದಾಸೋಹ ಸೂತ್ರ ಹೇಳುವ ಮೂಲಕ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವಕ್ಕೆ ಸ್ವಾಗತ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಶರಣಬಸವ ವಿವಿಯ ಕುಲಪತಿ ಅನೀಲಕುಮಾರ್ ಬಿಡ್ವೆ, ಲಕ್ಷ್ಮೀ ಮಾಕಾ, ಟಿವಿ ಶಿವಾನಂದನ್ ಮತ್ತಿತರರು ಇದ್ದರು.