ಕಲಬುರಗಿ | ಪುಸ್ತಕದ ಜ್ಞಾನ ಮಸ್ತಕಕ್ಕೆ ಬರಲಿ : ಡಾ.ಸದಾನಂದ ಪೆರ್ಲ

Update: 2025-03-20 19:41 IST
Photo of Program
  • whatsapp icon

ಕಲಬುರಗಿ : ಬಹುಮುಖ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಪುಸ್ತಕದ ಜ್ಞಾನವು ಮಸ್ತಕಕ್ಕೆ ಬರಬೇಕಾಗಿದೆ ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಣಾಧಿಕಾರಿ ಡಾ.ಸದಾನಂದ ಪೆರ್ಲ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕಲಬುರಗಿಯ ಆಚಾರ್ಯ ಪಿಯು ಕಾಲೇಜು ವತಿಯಿಂದ ಮಾ.20ರಂದು ಆಚಾರ್ಯ ಪಿಯು ಕಾಲೇಜ್ ನಲ್ಲಿ ಏರ್ಪಡಿಸಿದ ಕನ್ನಡ ಪ್ರಬಂಧ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸೃಜನಶೀಲತೆ ಮತ್ತು ಕ್ರಿಯಾತ್ಮಕತೆಯಿಂದ ದೂರವಾಗುತ್ತಿರುವುದು ವಿಷಾದನೀಯ ಸಂಗತಿ. ಕೇವಲ ಅಂಕ ಪಡೆಯುವ ತವಕದಿಂದ ಯಾಂತ್ರಿಕ ಬದುಕು ಸಾಗಿಸುತ್ತಿದ್ದು ಬದುಕಿನ ಹಲವಾರು ಮಜಲುಗಳಿಂದ ವಿಮುಖರಾಗುತ್ತಿರುವುದು ಖೇದಕರ. ಪುಸ್ತಕದ ಓದು ವ್ಯಕ್ತಿತ್ವವನ್ನು ಅರಳಿಸುತ್ತದೆ. ಗಾಂಧೀಜಿ, ಅಂಬೇಡ್ಕರ್, ವಿಶ್ವೇಶ್ವರಯ್ಯ ಮುಂತಾದವರು ಪುಸ್ತಕ ಪ್ರೀತಿಯಿಂದ ಮಹಾನ್ ಸಾಧನೆ ಮಾಡಿರುವುದು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಾಗಿದೆ. ಪ್ರಾಧಿಕಾರವು ರಾಜ್ಯದಲ್ಲಿ ಮಾದರಿಯಾದ ಕಾರ್ಯಕ್ರಮಗಳನ್ನು ರೂಪಿಸಿ ಶಾಲಾ-ಕಾಲೇಜು ಮತ್ತು ಮನೆಬಾಗಿಲಿಗೆ ಪ್ರಾಧಿಕಾರವನ್ನು ಮುಟ್ಟಿಸುವ ಕೆಲಸ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಬಹುಮಾನ ವಿತರಣೆ ಮಾಡಿ ಮಾತನಾಡಿದ ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ಪಿ.ಯು ಕಾಲೇಜಿನ ಪ್ರಾಂಶುಪಾಲರ ಬಿ ಎಸ್ ಮಾಲಿ ಪಾಟೀಲ್, ಜ್ಞಾನ ದಿಂದ ವ್ಯಕ್ತಿತ್ವಕ್ಕೆ ಗೌರವ ಸಿಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯು ಓದುವ ಹವ್ಯಾಸವನ್ನು ಬೆಳೆಸಿ, ಪ್ರತಿಭಾವಂತನಾಗಬೇಕಾಗಿದೆ .ಮಕ್ಕಳಲ್ಲಿ ಓದುವ ಹವ್ಯಾಸವನ್ನು ರೂಢಿಸಲು ಪುಸ್ತಕ ಪ್ರಾಧಿಕಾರದ ಕೆಲಸ ಸಾರ್ಥಕವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲಬುರಗಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ವಿಜಯ ಕುಮಾರ್ ರೋಣದ ಮಾತನಾಡಿ, ಜ್ಞಾನಕ್ಕೆ ಬಡತನವೆಂಬುದಿಲ್ಲ ಸತತ ಪ್ರಯತ್ನದಿಂದ ಓದು ಮುಂದುವರಿಸಿದರೆ ವ್ಯಕ್ತಿ ಎತ್ತರದ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಓದುವ ಮನೋಭಾವ ರೂಡಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಬಹುದು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಹೆಚ್.ನಿರಗುಡಿ ಮಾತನಾಡಿ, ಪ್ರಾಧಿಕಾರವು ಓದುವ ಹವ್ಯಾಸವನ್ನು ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಂಬಲವನ್ನು ವೃದ್ಧಿಸಲು ಪ್ರಬಂಧ ಸ್ಪರ್ಧೆ, ನನ್ನ ನೆಚ್ಚಿನ ಪುಸ್ತಕ, ರಸಪ್ರಶ್ನೆ,ಕಾರ್ಯಕ್ರಮಗಳನ್ನು ನಡೆಸಿ ಉತ್ತೇಜನ ನೀಡುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್ ,ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಪ್ರಾಧಿಕಾರದಿಂದ ವಿದ್ಯಾರ್ಥಿಗಳಿಗಾಗಿ ಅನೇಕ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ರಾಜ್ಯದಲ್ಲಿ ಪ್ರತಿವರ್ಷ 10 ಸಾವಿರಕ್ಕೂ ಅಧಿಕ ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದು ಗ್ರಂಥಾಲಯದಲ್ಲಿ ನೋಂದಣಿಯಾಗುತ್ತಿವೆ. ರಾಜ್ಯದಲ್ಲಿ ಅನೇಕ ಕವಿಗಳು ಪುಸ್ತಕ ಪ್ರಕಾಶನ ಮಾಡುತ್ತಿದ್ದಾರೆ. ಪ್ರಾಧಿಕಾರ ಉತ್ತಮ ಪ್ರಕಾಶಕರಿಗೆ ಹಾಗೂ ಪರಿಚಾರಕರು ಮುಂತಾದವಿವಿಧ ವಿಭಾಗಗಳಲ್ಲಿ ಕಳೆದ ಮೂರು ವರ್ಷಗಳ ಪ್ರಶಸ್ತಿಗಳನ್ನು ಶೀಘ್ರದಲ್ಲೇ ಪ್ರಕಟಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದರು.

ಆಚಾರ್ಯ ಪಿಯು ಕಾಲೇಜಿನ ಮಲ್ಲಿಕಾರ್ಜುನ ಬಿರಾದಾರ್ ಸ್ವಾಗತಿಸಿ ನಿರೂಪಿಸಿದರು. ಭೌತಶಾಸ್ತ್ರ ಪ್ರಾಧ್ಯಾಪಕರಾದ ಸಂತೋಷ ಪಿಳ್ಳೆ ಉಪಸ್ಥಿತರಿದ್ದರು. ಭಾಗ್ಯಶ್ರೀ ಮತ್ತು ಸಂಗಡಿಗರು ಪ್ರಾರ್ಥನ ಗೀತೆ ಹಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಭಾಗ್ಯಶ್ರೀ, ಕಾಶಮ್ಮ ಪ್ರಥಮ ಮತ್ತು ದ್ವಿತೀಯ ಬಹುಮಾನ ಐಶ್ವರ್ಯ ಸಿದ್ದಪ್ಪ ತೃತೀಯ ಬಹುಮಾನ ಪಡೆದರು ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News