ಕಲಬುರಗಿ | ನರೇಗಾದಲ್ಲಿ ಬೋಗಸ್ ಬಿಲ್‍ಗಳಿಂದ ಹಣ ಲೂಟಿ : ಸಿದ್ದರಾಮ ಹರವಾಳ ಆರೋಪ

ಕಲಬುರಗಿ: ಬಡ ಕೂಲಿಕಾರರ ಹೊಟ್ಟೆ ಮೇಲೆ ಹೊಡೆದು, ಅಲ್ಲಿ ಯಾವುದೆ ರೀತಿಯ ಕೆಲಸವನ್ನು ಮಾಡದೆ ರಾತ್ರೋ ರಾತ್ರೀ ಭ್ರಷ್ಟ ಅಧಿಕಾರಿಗಳು ಬೋಗಸ್ ಬಿಲ್ ಮಾಡಿ ನರೇಗಾದ ಸಂಪೂರ್ಣ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಕೃಷಿ ಕೂಲಿಕಾರರ ಸಂಘದ ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದರಾಮ ಹರವಾಳ ಆರೋಪಿಸಿದ್ದಾರೆ.
ನರೇಗಾ ಯೋಜನೆ ಸಮರ್ಪಕವಾಗಿ ಜಾರಿಗೆ ಒತ್ತಾಯಿಸಿ ಶಖಾಪೂರ ಗ್ರಾಮದಿಂದ ಅವರಾದ ಗ್ರಾಮದ ಮೂಲಕ ಕಲ್ಲೂರ ಗ್ರಾಮ ಪಂಚಾಯತ್ ಕಚೇರಿಯವರೆಗೆ ಬುಧವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲ್ಲೂಕು ಘಟಕದ ವತಿಯಿಂದ ಪಾದಯಾತ್ರೆ ಮಾಡಲಾಯಿತು.
ಅವರಾದ ಹಾಗೂ ಶಖಾಪೂರ ಗ್ರಾಮಗಳಲ್ಲಿ ನರೇಗಾ ಕೆಲಸವನ್ನು ಒಂದು ವಾರ ಬಿಟ್ಟು ಮತ್ತೊಂದು ವಾರ ಕೆಲಸವನ್ನು ನೀಡಲಾಗುತ್ತಿದೆ. ಅಲ್ಲದೆ ಬಡ ಕೂಲಿಕಾರರು ದುಡಿದಷ್ಟು ಕೂಲಿ ಹಣವನ್ನು ನೀಡದೆ ವಂಚಿಸಲಾಗುತ್ತಿದೆ. ಬೇಸಿಗೆಯಿಂದ ರೈತರ ಹೊಲಗಳಲ್ಲಿ ಯಾವುದೆ ಕೆಲಸವಿರುವುದಿಲ್ಲ ಹಾಗೂ ಬೇರೆ ಕೆಲಸ ಇಲ್ಲದೇ ಬಡ ಕುಲಿಕಾರರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿಕಾರರು ಗುಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ 2005ರಲ್ಲಿ ನರೇಗಾದಂತಹ ಮಹತ್ವಕಾಂಕ್ಷಿ ಯೋಜನೆ ಜಾರಿಗೆ ತರಲಾಗಿದೆ, ಆದರೆ ಈ ಮಹತ್ವಕಾಂಕ್ಷಿ ಯೋಜನೆಯನ್ನ ಭ್ರಷ್ಟ ಅಧಿಕಾರಿಗಳು ಸಂಪೂರ್ಣವಾಗಿ ವಿಫಲ ಮಾಡಲು ಪ್ರತಯತ್ನಿಸುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಪರಶುರಾಮ ಬಡಿಗೇರ, ಸಾಬಯ್ಯ ಗುತ್ತೆದಾರ, ಬಸವರಾಜ ಫರಹತಾಬಾದ್,ಜೈಭಿಮ್ ಮುದವಾಳ, ಶರಣಪ್ಪ ಹೊಸಮನಿ, ಸಾಬಯ್ಯ ಗುತ್ತೇದಾರ, ಬಸವರಾಜ ನಡುವಿನಕೇರಿ, ದವಲಸಾಬ ನದಾಫ್, ಮಲ್ಲಮ್ಮ ಕೂಡ್ಲಿ, ರೇವಣಸಿದ್ದ ಪೂಜಾರಿ, ಸಿದ್ದಣ್ಣ ಕೋಳಕೂರ, ನಿಂಗಣ್ಣ ಆಡೀನ್, ಮಹಾದೇವಿ ಶಖಾಪೂರ, ನಾಗಮ್ಮ ಪೂಜಾರಿ, ಸಿದ್ದಣ್ಣ ಪೂಜಾರಿ ಸೇರಿದಂತೆ ಅನೇಕರಿದ್ದರು.