ಕಲಬುರಗಿ | ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳ ಮೇಲೆ ವೆಬ್‍ಕಾಸ್ಟಿಂಗ್ ಮೂಲಕ ನಿಗಾ : ಭಂವರ್ ಸಿಂಗ್ ಮೀನಾ

ಕಲಬುರಗಿ : ಪ್ರಸಕ್ತ 2025ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ಯು ಮಾ. 21 ರಂದು ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ನಕಲು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳ ಮೇಲೆ ಇದೇ ಪ್ರಥಮ ಬಾರಿಗೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ತಿಳಿಸಿದರು.
ಸಿ.ಸಿ.ಟಿ.ವಿ. ವೆಬ್‍ಕಾಸ್ಟಿಂಗ್ ಪರಿವೀಕ್ಷಣೆಗಾಗಿ ಈಗಾಗಲೇ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಮ್‍ನ್ನು ವೀಕ್ಷಿಸಿದ ಅವರು, ಈ ಪರೀಕ್ಷೆಯು ಇದೇ ಮಾ.21 ರಿಂದ ಏ.4 ರ ವರೆಗೆ ನಡೆಯಲಿದ್ದು, ಒಟ್ಟು ಜಿಲ್ಲೆಯಲ್ಲಿ 131 ಪರೀಕ್ಷಾ ಕೇಂದ್ರಗಳಲ್ಲಿ 1,912 ಕೋಠಡಿಗಳಿದ್ದು, ಎಲ್ಲಾ ಪರೀಕ್ಷಾ ಕೇಂದ್ರದ ಕೊಠಡಿಗಳಲ್ಲಿ ಪರೀಕ್ಷೆಯನ್ನು ಸೂಸುತ್ರವಾಗಿ ನಡೆಸಲು ಒಟ್ಟು 2,452 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇಲ್ಲಿಂದ ಪ್ರತಿ ಕೇಂದ್ರದ ಕೋಣೆಗಳನ್ನು ನೇರವಾಗಿ ವೀಕ್ಷಿಸಲಾಗುತ್ತಿದೆ ಎಂದರು.
ಮೊದಲನೆ ಹಂತದ ಮಾರ್ಚ್ 17 ರಂದು ಸಿ.ಸಿ.ಟಿ.ವಿ ವೆಬ್‍ಕಾಸ್ಟಿಂಗ್ ಡ್ರೈ ರನ್ ಮಾಡಲಾಗಿದ್ದು, ಇಂದು ಎರಡನೇ ಹಂತದ ಸಿ.ಸಿ.ಟಿ.ವಿ ವೆಬ್‍ಕಾಸ್ಟಿಂಗ್ ಡ್ರೈ ರನ್ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿ.ಸಿ.ಟಿ.ಸಿ ಕ್ಯಾಮೆರಾಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಡ್ರೈ ರನ್‍ನಲ್ಲಿ ಕಂಡು ಬಂದಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ 131 ಪರೀಕ್ಷಾ ಕೇಂದ್ರಗಳಲ್ಲಿನ ಪರೀಕ್ಷಾ ಕೊಠಡಿಗಳಲ್ಲಿನ ಸಿಸಿಟಿವಿ ಕ್ಯಾಮರಾ ಹೊಂದಿರುವ ಕೋಣೆಗಳಲ್ಲಿ ಇಂಟರ್ ನೆಟ್ ಸ್ಪೀಡ್, ಯುಪಿಎಸ್ ಸೌಲಭ್ಯ ಕುರಿತು ತಾಲೂಕುವಾರು ಕೂಢೀಕೃತ ಮಾಹಿತಿಯನ್ನು ಪಡೆಯಲಾಗಿದೆ ಎಂದರು.
ಈ ಕಾರ್ಯಕ್ಕೆ ಪ್ರತಿ ತಾಲೂಕಿಗೆ ಗ್ರೂಪ್-ಬಿ ವೃಂದದ ಅಧಿಕಾರಿಗಳನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದ್ದು, ಎಲ್ಲಾ ತಾಲೂಕಿನ ಕಂಪ್ಯೂಟರ್ ಪ್ರೋಗ್ರಾಮರ್ ಅವರು ಈ ಕಾರ್ಯಕ್ಕೆ ಸಹಾಯಕರನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ವೆಬ್‍ಕಾಸ್ಟಿಂಗ್‍ನಲ್ಲಿ ಯಾವುದೇ ರೀತಿಯ ಲೋಪದೋಷವಾಗದಂತೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ರಮವಹಿಸಬೇಕೆಂದು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.