ಕಲಬುರಗಿ | ಕಡಗಂಚಿ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ
ಕಲಬುರಗಿ : ಆಳಂದ ತಾಲ್ಲೂಕಿನ ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಘಟಕ, ಕಾರ್ಮೆಲ್ ಸನ್ನಿಧಿ ಸಮಾಜ ಸೇವಾ ಸಂಸ್ಥೆ ಕಡಗಂಚಿ, ದೃಷ್ಟಿ ಕಣ್ಣಿನ ಆಸ್ಪತ್ರೆ ಕಲಬುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಅಳಂದ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಈ ಕಾರ್ಯಕ್ರಮವನ್ನು ಕಡಗಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದುಮತಿ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಶಿಬಿರದಲ್ಲಿ ಒಟ್ಟು 63 ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 15 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಆಯ್ಕೆ ಮಾಡಲಾಗಿತ್ತು, 17 ಜನರಿಗೆ ಕನ್ನಡಕ ನೀಡಲು ನಿರ್ಧರಿಸಲಾಯಿತು, ಮತ್ತು 6 ಜನರನ್ನು ದುರ್ಮಾಂಸ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು.
ಕಾರ್ಯಕ್ರಮದಲ್ಲಿ ಮೌಂಟ್ ಕಾರ್ಮೆಲ್ ಶಾಲೆಯ ವ್ಯವಸ್ಥಾಪಕ ಫಾ.ದೀಪಕ್ ಥಾಮಸ್, ಕಾರ್ಮೆಲ್ ಜ್ಯೋತಿ ಟ್ರಸ್ಟ್ ನ ಕಾರ್ಯದರ್ಶಿ ಫಾ.ವಿಲಿಯಂ ಮಿರಾಂಡಾ, ಕಡಗಂಚಿ ವೈದ್ಯಾಧಿಕಾರಿಗಳಾದ ಡಾ.ಮಿನಾಜ್, ಡಾ.ಶಿಲ್ಪ, ಎಲ್.ಹೆಚ್.ಬಿ.ಸವಿತಾ, ಕಣ್ಣಿನ ತಜ್ಞ ನಾಗೇಶ್ ಹಾಗೂ ಶಿರಾಜ್ ದಸ್ತಗಿರಿ ಉಪಸ್ಥಿತರಿದ್ದರು.
ಸಿಎಚ್‌ಸಿ ನರೋಣ ವೈದ್ಯಾಧಿಕಾರಿ ಡಾ.ಗುರುಶಾಂತಪ್ಪ, ನರೋಣಾ ಐಸಿಟಿಸಿ ಸಮಾಲೋಚಕ ದತ್ತಾರಾಜ್ ಪೂಜಾರಿ, ಶಿವಕುಮಾರ್ ಅಲಂಕಾರ್, ಪ್ರಯೋಗಶಾಲಾ ತಂತ್ರಜ್ಞ ರವೀಂದ್ರ ಮಲ್ಲಾಡೆ, ನರ್ಸ್ ರುಕ್ಮಿಣಿ ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು. ಈ ಶಿಬಿರವು ಗ್ರಾಮೀಣ ಭಾಗದ ಸಾರ್ವಜನಿಕರ ಆರೋಗ್ಯ ಕಾಳಜಿಗೆ ಸಹಾಯಕಾರಿಯಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.