ಕಲಬುರಗಿ | ಯುವಕರಲ್ಲಿ ನಾಯಕತ್ವದ ಗುಣ ಅಗತ್ಯ : ಸತ್ಯಂಪೇಟೆ
ಕಲಬುರಗಿ : ಸಮಾಜ, ಗ್ರಾಮಗಳಲ್ಲಿನ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯುವಕರು ನಾಯಕತ್ವದ ಗುಣ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟೆ ತಿಳಿಸಿದ್ದಾರೆ.
ಆಳಂದ ತಾಲ್ಲೂಕಿನ ಸಾಲೇಗಾಂವ ಗ್ರಾಮದ ಭಾವಲಿಂಗೇಶ್ವರ ಆಶ್ರಮದಲ್ಲಿ ಸಮತಾ ಲೋಕ ಶಿಕ್ಷಣ ಸಮಿತಿಯ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರ ಸೇವಾದಳದ ಮೂರು ದಿನಗಳ ಶಿಬಿರದಲ್ಲಿ ಮಾತನಾಡಿದರು.
ಸಮಾಜಮುಖಿ ನಾಯಕತ್ವವಹಿಸಿ ವರಿವರ್ತನೆ ತಂದ ಬುದ್ಧ, ಬಸವ, ಗಾಂಧೀಜಿ, ಸ್ವಾಮಿ ವಿವೇಕಾನಂದ, ಡಾ.ಅಂಬೇಡ್ಕರ್, ನೇತಾಜಿ ಹಾಗೂ ನೆಹರೂ ಅಂತಹ ನಾಯಕರು ಇಂದಿನ ಯುವಕರಿಗೆ ಆದರ್ಶವಾಗಬೇಕು, ಅವರ ಚಿಂತನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸಬಲ್ಲವು ಎಂದರು.
ಸಂಸ್ಕಾರ ಪ್ರತಿಷ್ಠಾನದ ಅಧ್ಯಕ್ಷ ವಿಠಲ ಚಿಕಣಿ ಮಾತನಾಡಿ, ಬಾಲ್ಯವಿವಾಹ, ಜಾತಿಪದ್ಧತಿ, ಮೂಢನಂಬಿಕೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯು ನಮ್ಮ ಗ್ರಾಮಗಳ ಪ್ರಗತಿಗೆ ಅಡ್ಡಿಯಾಗಿವೆ, ಯುವಕರು ಜನಪರವಾದ ಕಾಳಜಿ ಬೆಳಸಿಕೊಂಡರೆ ಮಾತ್ರ ಬದಲಾವಣೆ ಸಾಧ್ಯವಿದೆ ಎಂದರು.
ಸಂಬುದ್ಧ ಪದವಿ ಕಾಲೇಜಿನ ಪ್ರಾಂಶುಪಾಲ ಸಂಜಯ ಪಾಟೀಲ ಮಾತನಾಡಿ, ಬದುಕಿಗೆ ಪ್ರೇರಣೆ ನೀಡುವ, ಸ್ವಾವಲಂಬಿ ಜೀವನ ಕೊಡುವ ಅನೇಕ ಮಹಾತ್ಮರ ಜೀವನ ಸಂದೇಶ ನಮ್ಮ ಬದುಕಿಗೆ ದಾರಿ ದೀಪಗಳಾಗಿವೆ ಎಂದು ತಿಳಿಸಿದರು.
ಸಂಸ್ಥೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ನಾಗಣ್ಣ ಸಲಗರ, ಶಿವಲಿಂಗಪ್ಪ ಮಂಟಗಿ, ಮೃತ್ಯುಂಜಯ ಪಾಟೀಲ, ನಾಗರಾಜ ಘಂಟೆ, ಸತೀಶ ಕೂಗನೂರ, ನಿಂಗಪ್ಪ ಕವಲಗಿ, ಬಸವರಾಜ ಚೌಧರಿ ಉಪಸ್ಥಿತರಿದ್ದರು.
ಈ ಮೊದಲು ಸೋಲಾಪುರ ನ್ಯಾಯವಾದಿ ಶಂಕರರಾವ್ ಪಾಟೀಲ ಖಾನಾಪುರ ಅವರು ಮೂರು ದಿನದ ಶಿಬಿರವನ್ನು ಉದ್ಘಾಟಿಸಿದರು. ರಾಷ್ಟ್ರ ಸೇವಾದಳ ಸಂಪನ್ಮೂಲ ವ್ಯಕ್ತಿಗಳಾದ ಸದಾಶಿವ ಮಗ್ದುಮ್, ಬಾಬಾಸಾಬ ನದಾಫ್ ಅವರ ತಂಡದಿಂದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ, ಕ್ರಾಂತಿ ಗೀತೆಗಳ ಸಾಮೂಹಿಕ ಗಾಯನದ ತರಬೇತಿ ನೀಡಲಾಯಿತು. ಮುಖ್ಯಶಿಕ್ಷಕ ಎಲ್.ಎಸ್.ಬೀದಿ, ಪ್ರಭಾಕರ ಸಲಗರ ರಾಷ್ಟ್ರ ಸೇವಾದಳದ ಮಹತ್ವ ಮತ್ತು ಉದ್ದೇಶ ಕುರಿತು ಮಾತನಾಡಿದರು. ಪ್ರಮುಖರಾದ ಮಲ್ಲಯ್ಯ ಹಿರೇಮಠ, ಕುಪೇಂದ್ರ ವಡಗಾಂವ, ಶಿವಪುತ್ರ ಅಲ್ದಿ, ಸುನಿತಾ ಜಮಾದಾರ, ಸರಸ್ವತಿ ರೆಡ್ಡಿ, ಮಹೇಶ ಚೌಕಿಮಠ, ಬಸವರಾಜ ಪಾಸ್ವಾನ್ ಇದ್ದರು. ಸತೀಶ ಕೊಗನೂರೆ ನಿರೂಪಿಸಿದರು. ನಾಗರಾಜ ಘಂಟೆ ಸ್ವಾಗತಿಸಿದರು. ಮೃತ್ಯುಂಜಯ ಪಾಟೀಲ ವಂದಿಸಿದರು. ವಿದ್ಯಾರ್ಥಿಗಳು ಭಾಗವಹಿಸಿದ್ದರು.