ಕಲಬುರಗಿ | ಪದವಿಪೂರ್ವ ಉಪನ್ಯಾಸಕರ ಬೇಡಿಕೆಗಳಿಗೆ ಎಂಎಲ್ಸಿ ಶಶೀಲ್ ಜಿ.ನಮೋಶಿ ಬೆಂಬಲ

ಕಲಬುರಗಿ : ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನ್ಯಾಯಸಮ್ಮತ ಬೇಡಿಕೆಗಳಿಗೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯನ್ನು 'ರಜೆ ರಹಿತ ಇಲಾಖೆ (Non-Vacation Department)' ಎಂಬಂತೆ ಪರಿಗಣಿಸಿ, ಉಪನ್ಯಾಸಕರಿಗೆ ಸಂಬಂಧಪಟ್ಟ ಎಲ್ಲಾ ಸವಲತ್ತುಗಳನ್ನು ನೀಡುವಂತೆ ಮಾನ್ಯ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳು ಎಂಎಲ್ಸಿ ನಮೋಶಿ ಅವರಿಗೆ ಮನವಿ ಸಲ್ಲಿಸಿದರು.
ಈ ಮನವಿಯನ್ನು ಸ್ವೀಕರಿಸಿದ ನಮೋಶಿ, ಈ ವಿಷಯವನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. "ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಇದನ್ನು ತಕ್ಷಣವೇ ಈಡೇರಿಸುವಂತೆ ಶಿಕ್ಷಣ ಸಚಿವರ ಮಟ್ಟದಲ್ಲಿ ನಾನು ಒತ್ತಡ ತರಲಿದ್ದೇನೆ ಎಂದು ತಿಳಿಸಿದರು.
2025-26 ನೇ ಸಾಲಿನ ಶೈಕ್ಷಣಿಕ ಅವಧಿಗೆ ಜೂ.2 ರಂದು ಕಾಲೇಜು ಪ್ರಾರಂಭವಾಗಲಿದ್ದು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಫಲಿತಾಂಶವಿಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಕಡ್ಡಾಯವಾಗಿ ಬರೆಯುವಂತೆ ಹಾಗೂ ಅವರಿಗೆ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ನಡೆಸುವಂತೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಈ ಕ್ರಮದಿಂದಾಗಿ ಉಪನ್ಯಾಸಕರ ಮೇಲೆ ಕಾರ್ಯಭಾರ ಹೆಚ್ಚಾಗಿದ್ದು, ದಸರಾ ಮತ್ತು ಬೇಸಿಗೆ ರಜೆಯ ಹಕ್ಕನ್ನು ಕಸಿದಂತಾಗಿದೆ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ರಜೆ ರಹಿತ ಇಲಾಖೆಯ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಉಪನ್ಯಾಸಕರಿಗೂ ಅನ್ವಯಿಸಬೇಕು. ಇಲ್ಲವಾದರೆ ಈ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಪದಾಧಿಕಾರಿಗಳು ನಮೋಶಿ ಬಳಿ ಆಗ್ರಹಿಸಿದ್ದಾರೆ.
ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಮಲ್ಲಪ್ಪ, ಕಾರ್ಯದರ್ಶಿ ನರಸಪ್ಪ ರಂಗೋಲಿ, ಕಾರ್ಯಾಧ್ಯಕ್ಷ ನಾಮದೇವ ಕಡಕೋಳ, ಚಿಂಚೋಳಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಲಮೂರ, ನಲಕಂಟೆ, ಶ್ರೀದೇವಿ ಭಾವಿದೊಡ್ಡಿ, ನಾಗರಾಜ್, ಸವಿತಾ ನಾಶಿ, ಮಾಪಣ್ಣ ಜಿರೋಳ್ಳಿ, ಐ.ಕೆ.ಪಾಟೀಲ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.