ಕಲಬುರಗಿ | ರಾಷ್ಟ್ರೀಯ ಗ್ರಾಹಕರ ದಿನಾಚರಣೆ

Update: 2025-01-07 12:22 GMT

ಕಲಬುರಗಿ : ದೈನಂದಿನ ಬದುಕಿಗೆ ಯಾವುದೆ ವಸ್ತು ಅಥವಾ ಸೇವೆ ಪಡೆಯುವ ಗ್ರಾಹಕನಿಗೆ ಅದರ ಹಿನ್ನೆಲೆ ಮತ್ತು ಗುಣಮಟ್ಟದ ಸಂಪೂರ್ಣ ಮಾಹಿತಿ ಪಡೆಯುವ ಐದು ಹಕ್ಕು ವುಳ್ಳವನಾಗಿದ್ದಾನೆ. ಗ್ರಾಹಕರೇ ನಿಮ್ಮ ಹಕ್ಕಿನ ಬಗ್ಗೆ ತಿಳಿಯಲು ಜಾಗೃತರಾಗಿ. ಇದರಲ್ಲಿ ನಿಮಗೆ ಲಾಭ ಹೆಚ್ಚು ಎಂದು ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಅಧ್ಯಕ್ಷ ಎಂ.ಲೋಕೇಶ ಹೇಳಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಖಾಯಂ ಸಂಚಾರಿ ಪೀಠ ಕಲಬುರಗಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ ಮತ್ತು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ “ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2024” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕನು ಯಾವ ವಸ್ತುವಿನಿಂದ ಪ್ರಾಣ ಹಾನಿಯಾಗುವ, ವಸ್ತುವಿನ ಗುಣಮಟ್ಟ ಮತ್ತು ಪ್ರಮಾಣ, ವಸ್ತು ಕಳಪೆಯಾದಲ್ಲಿ ಯಾರಿಗೆ ದೂರು ಕೊಡಬೇಕು, ವಸ್ತುವಿನಿಂದ ನಷ್ಟ ಉಂಟಾದಲ್ಲಿ ಪರಿಹಾರ ಪಡೆಯುವ ವಿಧಾನ, ಅನುಚಿತ ವ್ಯಾಪಾರ ಪದ್ದತಿ ಕುರಿತು ಮಾಹಿತಿ ಪಡೆಯುವ ಹಕ್ಕುಳ್ಳವನಾಗಿದ್ದಾನೆ ಎಂದು ಗ್ರಾಹಕರ ಹಕ್ಕಿನ ಕುರಿತು ವಿವರಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಮಾತನಾಡಿ, ಗ್ರಾಹಕರೇ ದೇವರು ಎನ್ನುವ ವ್ಯಾಪಾರಿಗಳ ಪೈಕಿ ಕೆಲವರು ಮಿಶ್ರಣ ಮಾಡಿ ಮಾರಾಟ ಮಾಡುತ್ತಾರೆ. ಇಂತಹ ಮಾರಾಟಗಾರರ ಬಗ್ಗೆ ಎಚ್ಚರಿಕೆ ಹೊಂದಿರಬೇಕಾಗಿರುವುದು ಗ್ರಾಹಕರ ಕರ್ತವ್ಯವಾಗಿದೆ ಎಂದರು.

ವಸ್ತು ಖರೀದಿಸುವಾಗ ಎಚ್ಚರವಿರಲಿ :

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಮಾತನಾಡಿ, ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಇತ್ತೀಚೆಗೆ ಕಲಬೆರೆಕೆ ಸೇರಿಸಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಜಾಗೃತರಾಗಬೇಕಿದೆ. ನೊಂದ ಗ್ರಾಹಕರಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಲೆಂದೇ ಕಳೆದ ಸೆ.17 ರಂದು ಇಲ್ಲಿಯೇ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಲಬುರಗಿ ಪೀಠ ಆರಂಭಿಸಿದ್ದು, ಇದೂವರೆಗೆ 300 ಪ್ರಕರಣ ವಿಲೇವಾರಿ ಮಾಡಲಾಗಿದೆ. ಗ್ರಾಹಕರಲ್ಲಿ ಅರಿವು ಮೂಡಿಸುವ ಕೆಲಸ ಆಹಾರ ಇಲಾಖೆ ಮತ್ತು ಕಾನೂನುಮಾಪನ ಶಾಸ್ತ್ರ ಇಲಾಖೆ ನಿರಂತರವಾಗಿ ಮಾಡಬೇಕೆಂದು ಸಲಹೆ ನೀಡಿದರು.

ನೊಂದು ಮನೆಯಲ್ಲಿ ಕುಳಿತುಕೊಳ್ಳಬೇಡಿ, ಆಯೋಗಕ್ಕೆ ಬನ್ನಿ :

ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯರಾದ ನ್ಯಾಯವಾದಿ ವೈಜನಾಥ ಝಳಕಿ ಉಪನ್ಯಾಸ ನೀಡುತ್ತಾ, ಯಾವುದೇ ವಸ್ತು, ಸೇವಾ ನ್ಯೂನತೆಯಿಂದ ನಷ್ಟ ಹೊಂದಿದಲ್ಲಿ ಗ್ರಾಹಕರೆ ಸುಮ್ಮನೆ ಕುಳಿತುಕೊಳ್ಳದೇ ಆಯೋಗದ ಕದ ತಟ್ಟಿದಾಗ ಪರಿಹಾರ ಶತಸಿದ್ದ ಎಂದರು.

50 ಲಕ್ಷ ರೂ. ವರೆಗಿನ ಪರಿಹಾರಕ್ಕೆ ಜಿಲ್ಲಾ ಆಯೋಗ, 50 ಲಕ್ಷ ರೂ. ಗಳಿಂದ 2 ಕೋಟಿ ರೂ. ವರೆಗೆ ರಾಜ್ಯ ಆಯೋಗ ಹಾಗೂ 2 ಕೋಟಿ ರೂ. ಮೀರಿದ ಪ್ರಕರಣಗಳಿಗೆ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದಲ್ಲದೆ ವಿವಿಧ ಪ್ರಕರಣಗಳಲ್ಲಿ ನೊಂದ ಗ್ರಾಹಕರಿಗೆ ಆಯೋಗ ನೀಡಿದ ಪರಿಹಾರದ ಉದಾಹರಣೆ ನೀಡುತ್ತಾ, ಗ್ರಾಹಕರು ತಮ್ಮ ಹಕ್ಕುಗಳ ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ನ ಸದಸ್ಯರು ಹಾಗೂ ಶ್ರೀ ಬಸವೇಶ್ವರ ರೂರಲ್ ಡೆವಲಪ್ಮೆಂಟ್ ಟ್ರಸ್ಟಿನ ಅಧ್ಯಕ್ಷ ಬಾಪುಗೌಡ ಪಾಟೀಲ್, ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಅಶೋಕ ಶಾಸ್ತ್ರಿ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಶಿವಪುತ್ರ ಅಲ್ಲಾಪುರ ಸೇರಿದಂತೆ ಇತರೆ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಭೀಮರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಮಾಪನಶಾಸ್ತ್ರ ಇಲಾಖೆ ಮತ್ತು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ರತ್ನಾಕರ ತೋರಣ ಸ್ವಾಗತಿಸಿದರು. ಮಂಜು ಹೀರೊಳ್ಳಿಕರ್ ನಿರೂಪಿಸಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News