ಕಲಬುರಗಿ | ಎರಡು ಸಾವು ಪ್ರಕರಣ : ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ
ಕಲಬುರಗಿ : ಮಂಗಳವಾರ ರಾತ್ರಿ ನಗರದಲ್ಲಿ ಎರಡು ಸಾವು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಕಚೇರಿ ಸ್ಪಷ್ಟನೆ ನೀಡಿದ್ದು, ಮಾಲಗತ್ತಿ ಕ್ರಾಸ್ ಹತ್ತಿರದ ಮುಜಾಹಿರ್ ನಗರದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಮತ್ತೊಬ್ಬ ರೈಲ್ವೆ ಹಳಿಯಲ್ಲಿ ಬಿದ್ದು ಸಾವನಪ್ಪಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಮಾಲವಾಡಿಯ ನಿವಾಸಿ ಖಲೀಲ್ ತಂದೆ ಲಾಲ್ ಅಹ್ಮದ್ (37) ಎಂಬಾತನನ್ನು ಹತ್ಯೆ ಮಾಡಲಾಗಿದೆ. ವೈಯಕ್ತಿಕ ವಿಷಯದಲ್ಲಿ ಜಗಳ ನಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಲು ತನಿಖಾ ತಂಡದಿಂದ ತನಿಖೆ ನಡೆಯುತ್ತಿದೆ ಎಂದು ವಿವಿ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲು ಹಳಿಗೆ ಬಿದ್ದು ಸಾವನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆ ವಾಡಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಿಜುಗುರಿ ಪ್ರದೇಶದ ನಿವಾಸಿ ಅಲಿ ಪಟೇಲ್ (38) ಎಂಬಾತನೇ ಮೃತ ವ್ಯಕ್ತಿಯಾಗಿದ್ದು, ಈತ ಆಟೋ ಚಾಲಕನಾಗಿದ್ದು, ಕುಡಿದು ರೈಲ್ವೆ ಹಳಿಯಲ್ಲಿ ಬಿದ್ದು ಸಾವನಪ್ಪಿದ್ದಾನೆ ಎಂದು ವಾಡಿ ರೈಲ್ವೆ ಪೊಲೀಸ್ ಠಾಣೆಯ ಸಿಪಿಐ ಬಸವರಾಜ್ ವಾಲಿ ಅವರು ಮಾಹಿತಿ ನೀಡಿದ್ದಾರೆ.
ಮಾಲಗತ್ತಿ ಕ್ರಾಸ್ ಹತ್ತಿರ ನಡೆದ ಕೊಲೆ ಘಟನೆ ಮತ್ತು ರೈಲ್ವೆ ಹಳಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆಗಳು ಬೇರೆ ಬೇರೆಯಾಗಿರುತ್ತವೆ ಎಂದು ಕಮಿಷನರ್ ಕಚೇರಿ ಸ್ಪಷ್ಟನೆ ನೀಡಿದ್ದು, ಮಂಗಳವಾರ ರಾತ್ರಿ ಎರಡು ಸಾವುಗಳ ಕುರಿತು ಎರಡು ಕೊಲೆಯಾಗಿವೆ ಎಂದು ಗೊಂದಲಕ್ಕೆ ಕಾರಣವಾಗಿ ಸಾಮಾಜಿಕ ಜಾಲತಾಣದಲ್ಲಿ ಎರಡು ಕೊಲೆ ನಡೆದಿದೆ ಎನ್ನಲಾಗಿತ್ತು, ಆದರೆ ಇದೀಗ ಪೊಲೀಸ್ ಇಲಾಖೆಯಿಂದ ಎರಡು ಪ್ರತ್ಯೇಕ ಪ್ರಕರಣ ಎಂದು ಮಾಹಿತಿ ಲಭ್ಯವಾಗಿದೆ.