ಸ್ಟ್ಯಾನ್ ಫೋರ್ಡ್ ಶ್ರೇಷ್ಠ ವಿಜ್ಞಾನಿಗಳ ಪಟ್ಟಿ: ಗುಲ್ಬರ್ಗಾ ವಿವಿಯ ಇಬ್ಬರು ಪ್ರಾಧ್ಯಾಪಕರಿಗೆ ಸ್ಥಾನ
ಕಲಬುರಗಿ: ಅಮೆರಿಕ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ವಾರ್ಷಿಕವಾಗಿ ಪ್ರಕಟಿಸುವ ವಿಶ್ವದ ಅತ್ಯುತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಇಬ್ಬರು ಪ್ರಾಧ್ಯಾಪಕರು ಸತತ ಎರಡನೇ ಬಾರಿ ಸ್ಥಾನ ಪಡೆದಿದ್ದಾರೆ.
ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರೊ.ಸಿ.ಸುಲೋಚನಾ ಮತ್ತು ಪ್ರೊ. ಜೆ. ಸಿ. ಉಮಾವತಿ ಈ ಗೌರವಕ್ಕೆ ಭಾಜನರಾದ ಇಬ್ಬರು ಪ್ರಾಧ್ಯಾಪಕರಾಗಿದ್ದಾರೆ.
ಇವರು ವಿಶ್ವದರ್ಜೆಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟನೆಗಳು ಹಾಗೂ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ವೆಬ್ ಆಫ್ ಸೈನ್ಸ್, ಸ್ಕೋಪಸ್, ಗೂಗಲ್ ಸ್ಕಾಲರ್, ಎಚ್ ಇಂಡೆಕ್ಸ್, ಇಂಪ್ಯಾಕ್ಟ್ ಫ್ಯಾಕ್ಟರ್ ಹಾಗೂ ಸೈಟೇಶನ್ ಸೇರಿದಂತೆ ಹಲವಾರು ಸಂಯೋಜಿತ ಮಾನದಂಡಗಳನ್ನು ಆಧರಿಸಿ ವಿಶ್ವದ ಶೇ. 2ರಷ್ಟು ಅತ್ಯುತ್ತಮ ಸಂಶೊಧಕರನ್ನು ಗುರುತಿಸಿರುವ ಜಾಗತಿಕ ಮಟ್ಟದ ಎಲ್ಸಿವಿಯರ್ ಸಂಸ್ಥೆಯು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಿ ಜಾಗತಿಕ ವಿಜ್ಞಾನಿಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಿದೆ.
ಜಾಗತಿಕ ಮಟ್ಟದ ವಿಜ್ಞಾನಿಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ಇಬ್ಬರು ವಿಜ್ಞಾನಿಗಳ ಸಾಧನೆಗೆ ವಿವಿಯ ಕುಲಪತಿ ಪ್ರೊ. ದಯಾನಂದ ಅಗಸರ್, ಕುಲಸಚಿವ ಪ್ರೊ.ರಾಜನಾಳ್ಕರ್ ಲಕ್ಷ್ಮಣ, ಮೌಲ್ಯಮಾಪನ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ವಿತ್ತಾಧಿಕಾರಿ ಗಾಯತ್ರಿ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ
ಜಾಗತಿಕ ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ನಮ್ಮ ವಿಶ್ವವಿದ್ಯಾಲಯದ ಗಣಿತ ವಿಭಾಗದ ವಿಜ್ಞಾನಿಗಳಾದ ಪ್ರೊ.ಸಿ.ಸುಲೋಚನಾ ಹಾಗೂ ಪ್ರೊ.ಜೆ.ಸಿ.ಉಮಾವತಿ ಸ್ಥಾನ ಪಡೆದಿರುವುದು ಹೆಮ್ಮಯ ವಿಚಾರ. ವಿಶ್ವದರ್ಜೆ ಮಟ್ಟದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದಂತಾಗಿದೆ. ಈ ಇಬ್ಬರು ವಿಜ್ಞಾನಿಗಳ ಸಾಧನೆ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗಿದೆ.
-ಪ್ರೊ. ದಯಾನಂದ ಅಗಸರ, ಕುಲಪತಿ
ಗುಲ್ಬರ್ಗಾ ವಿಶ್ವವಿದ್ಯಾನಿಲಯ