ಕಲಬುರಗಿಯಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ : ಸಚಿವ ಶರಣಪ್ರಕಾಶ್ ಪಾಟೀಲ್

ಸಿದ್ದರಾಮಯ್ಯ, ಡಾ.ಶರಣಪ್ರಕಾಶ್ ಪಾಟೀಲ್
ಕಲಬುರಗಿ : ಯುವ ಸಮೂಹಕ್ಕೆ ಉದ್ಯೋಗಾವಕಾಶ ಹೆಚ್ಚಿಸುವ ಹಾಗೂ ಸ್ಥಳೀಯವಾಗಿ ಕೌಶಲ್ಯ ಕಲಿಸಿ, ಜಾಗತಿಕ ಮಟ್ಟದಲ್ಲಿ ಕೆಲಸ ಗಿಟ್ಟಿಸಲು ಸಜ್ಜಾಗಲು ತರಬೇತಿ ನೀಡುವ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಯನ್ನು ಕಲಬುರಗಿಯಲ್ಲಿ ಆರಂಭಿಸಲಾಗುತ್ತಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಎ.16ರಂದು (ಬುಧವಾರ) ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಆಧುನಿಕ ತಂತ್ರಜ್ಞಾನದೊಂದಿಗೆ ಶ್ರೇಷ್ಠ ಗುಣಮಟ್ಟದ ಕೌಶಲ್ಯ ತರಬೇತಿ ನೀಡಿ, ಕೌಶಲ್ಯಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇಲ್ಲಿ ತರಬೇತಿ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಹುದಾಗಿದೆ ಎಂದು ಸಚಿವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷ 2,500 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ 5 ವರ್ಷಗಳಲ್ಲಿ 37,500 ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುವುದು. ಯುವ ಸಮೂಹಕ್ಕೆ ಉದ್ಯೋಗ ಅವಕಾಶ ಸೃಷ್ಟಿ ಮಾಡಿಕೊಡಬೇಕೆಂಬ ನಮ್ಮ ಸರ್ಕಾರದ ಆಶಯಕ್ಕೆ ಪೂರಕವಾಗಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಇಲಾಖೆಯ ಮುಖ್ಯ ಧ್ಯೇಯ ಎಂದರೆ "ಸ್ಕಿಲ್ ಲೋಕಲಿ, ವರ್ಕ್ ಗ್ಲೋಬಲಿ" ಎಂಬುದಾಗಿದೆ. ಯುವ ಸಮೂಹವನ್ನು ಈ ನಿಟ್ಟಿನಲ್ಲಿ ಸಬಲೀಕರಣಗೊಳಿಸುವುದೇ ನಮ್ಮ ಆದ್ಯತೆಯಾಗಿದೆ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರದ ಮಾರ್ಗದರ್ಶನ ಪಡೆದು ಬರುವ ವಿದ್ಯಾರ್ಥಿ ಯಾವುದೇ ಕೆಲಸ ಮಾಡಲು ಸಜ್ಜಾಗಿರುತ್ತಾನೆ. ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಈ ರೀತಿಯ ಕೇಂದ್ರವನ್ನು ಮೈಸೂರಿನ ವರುಣಾ ಮತ್ತು ಕೊಪ್ಪಳದ ತಳಕಲ್‌ನಲ್ಲಿಯೂ ಆರಂಭಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಬುಧವಾರ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿಯೂ ಕೌಶಲ್ಯ ಆಧಾರಿತ ಉದ್ಯೋಗಗಳಿಗೆ ಆದ್ಯತೆ ಸಿಗಲಿದೆ ಎಂದಿದ್ದಾರೆ.
ತರಬೇತಿ ಕೇಂದ್ರದ ಸ್ಥಾಪನೆ ಉದ್ದೇಶ :
ಕೈಗಾರಿಕಾ ತರಬೇತಿ, ಯುವ ಮತ್ತು ಮಹಿಳೆಯರ ಸಬಲೀಕರಣ, ಪ್ರಾದೇಶಿಕ ಅಸಮತೋಲನ ನಿವಾರಣೆ, ಉದ್ಯೋಗ ಸೃಷ್ಟಿ, ವಿದೇಶಿ ಭಾಷಾ ಪ್ರಯೋಗಾಲಯಗಳ ಬಳಕೆ (ಜರ್ಮನಿ, ಜಪಾನ್), ವಿಶ್ವ ಕೌಶಲ್ಯ ಸ್ಪರ್ಧೆಗಳಿಗೆ ತರಬೇತಿ, ಜಾಗತಿಕ ಮಟ್ಟದಲ್ಲಿ ಉದ್ಯೋಗ ಅವಕಾಶ ಸೃಷ್ಟಿ.
ಈ ಕ್ಷೇತ್ರಗಳಲ್ಲಿ ತರಬೇತಿ :
ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೊಮೇಷನ್ ಮತ್ತು ರೋಬೋಟಿಕ್ಸ್, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಹಣಕಾಸು, ವಿಮೆ, ರಿಟೇಲ್, ಆತಿಥ್ಯ ಮತ್ತು ಸೇವೆ (ಹಾಸ್ಟಿಟಾಲಿಟಿ ಮತ್ತು ಸರ್ವೀಸ್).