ಕಲಬುರಗಿ | ಜಿಲ್ಲಾ ನ್ಯಾಯಲಯದ ಆವರಣದಲ್ಲೇ ವ್ಯಕ್ತಿಯೊಬ್ಬನಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ

Update: 2024-07-02 17:26 GMT

ಕಲಬುರಗಿ : ಹಾಡಹಗಲೇ ಜಿಲ್ಲಾ ನ್ಯಾಯಲಯದ ಆವರಣದಲ್ಲಿ ವ್ಯಕ್ತಿಯೊಬ್ಬನ್ನು ಬೆನ್ನತ್ತಿ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ನಗರದ ಬಾಪುನಗರದ ನಿವಾಸಿ ಧೀರಜ್ ಶಂಕರರಾವ ಉಪಾಧ್ಯಾಯ (44) ಹಲ್ಲೆಗೊಳಗಾದ ವ್ಯಕ್ತಿ. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪ ಇದೆ ಎನ್ನಲಾಗಿದೆ.

ಜಮೀನು ವಿವಾದ ಹಾಗೂ ಧೀರಜ್ ಇಟ್ಟುಕೊಂಡಿದ್ದ ಅಕ್ರಮ ಸಂಬಂಧದ ವಿಷಯಕ್ಕೆ ದ್ವೇಷ ಸಾಧಿಸಿದ ಆರೋಪಿಗಳು ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಧೀರಜ್ ತನ್ನ ವಕೀಲನ್ನು ಭೇಟಿಯಾಗಲೆಂದು ಹೋದಾಗ ನಗರದ ಜಿಲ್ಲಾ ನ್ಯಾಯಲಯದ ಆವರಣದಲ್ಲಿ ಅಟ್ಟಾಡಿಸಿಕೊಂಡು ಆತನ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸಚೀನ್ (32), ಸಂಜಯ (26) ಹಾಗೂ ಪ್ರಶಾಂತ (19) ಎಂಬವರೇ ಬಂಧಿತ ಆರೋಪಿಗಳು ಎನ್ನಲಾಗಿದ್ದು, ವೀರೇಶ, ಮಹೇಶ, ರಾಮು ಹಾಗೂ ಅಮೀತ್ ಎಂಬ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹಲ್ಲೆ ವೇಳೆ ಅಲ್ಲೇ ಇದ್ದ ಸಾರ್ವಜನಿಕರು ಹಾಗೂ ವಕೀಲರು ಸೇರಿ ಆರೋಪಿಗಳನ್ನು ಹಿಡಿದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವ ದಾಖಲಿಸಿಕೊಂಡ ಪೊಲೀಸರು ಬಂಧಿತ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News