ಮರಕಂಬಿ ಪ್ರಕರಣದ ತೀರ್ಪು, ಸಂವಿಧಾನಕ್ಕೆ ಸಂದ ಜಯ : ಮಾವಳ್ಳಿ ಶಂಕರ್

Update: 2024-10-28 17:49 GMT

ಕಲಬುರಗಿ : "ಎಲ್ಲೆಡೆ ಕಂಬಾಲಿಪಲ್ಲಿಯಂತಹ ದಲಿತ ನರಮೇಧ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತಿದೆ. ಕೋರ್ಟ್‌ಗಳಲ್ಲಿ ಪ್ರಕರಣಗಳು ಖುಲಾಸೆಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಮರಕಂಬಿ ದಲಿತ ದೌರ್ಜನ್ಯ ಪ್ರಕರಣ ತೀರ್ಪು ದೇಶದಲ್ಲಿಯೇ ಸಂವಿಧಾನ ಹಾಗೂ ನ್ಯಾಯಕ್ಕೆ ದೊರೆತ ಜಯವಾಗಿದೆ" ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಲಬುರಗಿ ಜಿಲ್ಲಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆ ಹಾಗೂ ಜಿಲ್ಲಾ ಸಮಿತಿ ಪುನರ್ ರಚನಾ ಸಭೆಯಲ್ಲಿ ಅವರು ಮಾತನಾಡಿದರು.

ಮರಕಂಬಿಯ ಐತಿಹಾಸಿಕ ತೀರ್ಪನ್ನು ದಲಿತ ಸಂಘರ್ಷ ಸಮಿತಿಯು ಅತ್ಯಂತ ಹೆಮ್ಮೆಯಿಂದ ಸ್ವಾಗತಿಸುತ್ತದೆ. ಈ ದೇಶದ ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶಮಾಡುವ ಹುನ್ನಾರ ನಡೆಸುತ್ತಿವೆ. ಈ ಸವಾಲಿನ ವಿರುದ್ಧ ದೇಶದ ಹಾಗೂ ರಾಜ್ಯದ ದಮನಿತ ವರ್ಗಗಳು, ಶೋಷಿತ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. ಯುವ ಸಮುದಾಯ ಮತೀಯ ಶಕ್ತಿಗಳಿಗೆ ಹಾಗೂ ಅವರ ಸಂಚುಗಳಿಗೆ ಬಲಿಯಾಗದೆ ಎಚ್ಚರವಹಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ, ರಾಮಣ್ಣ ಕಲ್ಲದೇವನಹಳ್ಳಿ, ಮುಖಂಡರಾದ ನಾಗಣ್ಣ ಬಡಿಗೇರ, ಅರ್ಜುನ ಗೊಬ್ಬೂರ, ವಿಭಾಗೀಯ ಸಂಚಾಲಕ ಶ್ರೀನಿವಾಸ ಖೇಳಗಿ, ಸಂಜುಕುಮಾರ ಕೆಂಬಾಗಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ವೇಳೆ ದಸಂಸ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳ ಆಯ್ಕೆ: 

ಸಂಜುಕುಮಾರ್ ಜೇವಳಕರ್ (ಜಿಲ್ಲಾ ಸಂಚಾಲಕ), ಬಾಬುರಾವ ಶೆಳಿ, ಶ್ರೀಹರಿ ಕರಕಳ್ಳಿ, ವಿಜಯಕುಮಾರ ಸಜ್ಜನ್, ಮಹಾಂತೇಶ ದೊರೆ, ಸತೀಶ ಕೋಬಾಳ್ಕರ್, ಮಾರುತಿ ಹುಳಗಳಕರ್, ಸೋಮಶೇಖರ ಬೆಡರಪಳ್ಳಿ (ಜಿಲ್ಲಾ ಸಂಘಟನಾ ಸಂಚಾಲಕರು), ದೇವೇಂದ್ರಪ್ಪ ಕುಮಂಸಿ (ಜಿಲ್ಲಾ ಖಜಾಂಚಿ), ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ಶಿವಪುತ್ರಪ್ಪ ಮಾವಿನ್ ಅವರನ್ನು ನೇಮಕ ಮಾಡಲಾಯಿತು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News