ಚುನಾವಣೆ ಮುಗಿದ ಮರುದಿನವೇ ವಕ್ಫ್, ಕೋಮು ಮಾತುಗಳು ಹೋಗುತ್ತವೆ : ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಕಲಬುರಗಿ: "ಎಲ್ಲಿ ಕೋಮು ದ್ವೇಷದ ಬಗ್ಗೆ ಬೆಂಕಿ ಹಚ್ಚಬೇಕು ಎಂದು ನಿರ್ಧರಿಸುತ್ತಾರೋ ಅಲ್ಲಿ ಬಿಜೆಪಿಯ ಸಂಸದ, ಶಾಸಕ ಮತ್ತು ಮುಖಂಡರು ಕಾಣುತ್ತಾರೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ತೇಜಸ್ವಿ ಸೂರ್ಯ ಅವರು ವಕ್ಫ್ ಕುರಿತಾಗಿ ನೀಡಿರುವ ಹೇಳಿಕೆಯ ಕುರಿತು ಗುರುವಾರ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ʼತೇಜಸ್ವಿ ಸೂರ್ಯ ಹೇಳೋದು ನಂಬುತ್ತೀರಾ? ಅಥವಾ ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದನ್ನು ನಂಬ್ತೀರಾ?ʼ ಎಂದು ಪ್ರಶ್ನಿಸಿದ ಅವರು, ರಾಜ್ಯದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಿಎಂ ಅಭಯ ಕೊಟ್ಟಿದ್ದಾರೆ. ಇನ್ನೂ ಪಹಣಿಯ ಕಾಲಂನಲ್ಲಿ ವಕ್ಫ್ ಎಂದು ಹೆಸರು ಬಂದರೆ, ತಿದ್ದುಪಡಿಗೆ ಅವಕಾಶವಿರುತ್ತದೆ. ಕಾನೂನಾತ್ಮಕ ಪ್ರಕ್ರಿಯೆಯ ಮೂಲಕ ಸರಕಾರವೇ ಅದನ್ನು ಪರಿಹರಿಸುತ್ತದೆʼ ಎಂದು ಹೇಳಿದರು.
ʼರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಹಿಂದೂ ದೇವಸ್ಥಾನಗಳನ್ನು ಏನು ಮಾಡಿದ್ದರು. ಯಾವುದೇ ಸಮಸ್ಯೆಗಳನ್ನು ಪರಿಹರಿಸಿಲ್ಲ, ಖುದ್ದಾಗಿ ಅವರು ಗಾಣಗಾಪುರ ದೇವಸ್ಥಾನವನ್ನೇ ಬಿಟ್ಟಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼರೈತರ ಬಗ್ಗೆ ಇಷ್ಟೊಂದು ಕಾಳಜಿ ತೋರುವ ಬಿಜೆಪಿಗರೇ ದಿಲ್ಲಿಯಲ್ಲಿ ನಡೆದ ರೈತ ಹೋರಾಟವನ್ನು ಯಾಕೆ ಹತ್ತಿಕ್ಕಿದ್ದರು?. ತಪ್ಪು ಕಾನೂನುಗಳನ್ನು ತಂದು ಯಾಕೆ ಅವುಗಳನ್ನು ವಾಪಸ್ ಪಡೆದರು ಎಂಬುವುದನ್ನು ಮೊದಲು ತೇಜಸ್ವಿ ಸೂರ್ಯನಂಥವರು ತಿಳಿಯಲಿ, ಆಮೇಲೆ ನಮಗೆ ಬುದ್ಧಿವಾದ ಹೇಳಲು ಬರಲಿ. ಬಿಜೆಪಿಗರು ಇದೀಗ ಉಪಚುನಾವಣೆ ಬಂದಿದ್ದ ಮಾತ್ರಕ್ಕೆ ಇದನ್ನು ಎಳೆದುತರುತ್ತಿದ್ದಾರೆ. ಚುನಾವಣೆ ಮುಗಿದ ಮರುದಿನವೇ ವಕ್ಫ್, ಕೋಮು ಮಾತುಗಳು ಹೋಗುತ್ತವೆʼ ಎಂದು ಹೇಳಿದರು.