ಕಲಬುರಗಿ | ಕಲ್ಯಾಣ ಪಥ ರಸ್ತೆ ನಿರ್ಮಾಣಕ್ಕೆ ಶೀಘ್ರ ಅಡಿಗಲ್ಲು : ಪ್ರಿಯಾಂಕ್ ಖರ್ಗೆ

Update: 2024-10-31 13:33 GMT

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ಗ್ರಾಮೀಣ ರಸ್ತೆ ಸುಧಾರಣೆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಕಲ್ಯಾಣ ಪಥ ಯೋಜನೆಯಡಿ 1,000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಇನ್ನು 15 ದಿನದಲ್ಲಿ ಚಾಲನೆ ನೀಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲೆಲ್ಲಿ ರಸ್ತೆ ನಿರ್ಮಿಸಬೇಕೆಂದು ಗುರುತಿಸಿ ಟೆಂಡರ್ ಸಹ ಕರೆಯಲಾಗಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಇದಲ್ಲದೆ, ಪ್ರಗತಿ ಪಥ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30-40 ಕಿ.ಮೀ. ರಸ್ತೆ ಕಾಮಗಾರಿ ಸಹ ಆರಂಭವಾಗಲಿದೆ. ಇದರ ಜೊತೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಲ್ಲಿಯೂ ರಸ್ತೆ ನಿರ್ಮಿಸುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಪ್ರದೇಶ ಭಾಗದ ಗ್ರಾಮೀಣ ಭಾಗದಲ್ಲಿ ಸಂಪರ್ಕ ಉತ್ತಮಗೊಳ್ಳಲಿದೆ ಎಂದರು.

ʼಕಲ್ಯಾಣ ಕರ್ನಾಟಕ ಭಾಗದಲ್ಲಿ ತಲಾ 30 ಲಕ್ಷ ರೂ. ವೆಚ್ಚದಲ್ಲಿ ಸುಮಾರು 400 ಸಮುದಾಯ ಶೌಚಾಲಯ ಆರ್.ಡಿ.ಪಿ.ಆರ್.ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಕಲಬುರಗಿ ನಗರದಲ್ಲಿಯೂ ಬೇಡಿಕೆ ಅನಗುಣವಾಗಿ ಸಮುದಾಯ ಶೌಚಾಲಯ ನಿರ್ಮಿಸಲಾಗುವುದುʼ ಎಂದು ಪತ್ರಕರ್ತರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ನ.4ರಿಂದ ಹತ್ತಿ ಖರೀದಿ:

ಬೆಂಬಲ ಬೆಲೆ ಯೋಜನೆಯಡಿ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಸಹಕಾರದೊಂದಿಗೆ ಹತ್ತಿ ಖರೀದಿಗೆ ಬರುವ ನ.4ರಿಂದ ಕಲಬುರಗಿ ತಾಲೂಕಿನಲ್ಲಿ 3, ಜೇವರ್ಗಿಯಲ್ಲಿ 5 ಹಾಗೂ ಅಫಜಲಪೂರ ತಾಲೂಕಿನಲ್ಲಿ 4 ಸೇರಿ ಒಟ್ಟು 12 ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದರು.

ಪ್ರಸ್ತುತ ಮಾರುಕಟ್ಟೆಯಲಿ ಪ್ರತಿ ಕ್ವಿಂಟಾಲ್‌ಗೆ 6,993 ರೂ. ಗಳಿದ್ದು, ಎಂ.ಎಸ್.ಪಿ. ದರದಲ್ಲಿ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 7,521 ರೂ. ನೀಡಿ ಖರೀದಿಸಲಾಗುತ್ತಿದೆ. ಜಿಲ್ಲೆಯ ರೈತ ಬಾಂಧವರು ಇದರ ಲಾಭ ಪಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News