ಧರ್ಮ ದಾರಿಯೇ ಹೊರತು ಗುರಿ ಅಲ್ಲ: ಯೋಗೇಶ್ ಮಾಸ್ಟರ್
ಕಲಬುರಗಿ: ಹಿಂದೂ-ಮುಸ್ಲಿಂ ಸೌಹಾರ್ದ ಪರಂಪರೆಗೆ ದೊಡ್ಡ ಇತಿಹಾಸವಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಸೌಹಾರ್ದತೆ ಸಂಸ್ಕೃತಿಯ ಭಾಗವಾಗಿದೆ ಹಾಗೂ ಧರ್ಮ ದಾರಿಯೇ ಹೊರತು ಗುರಿ ಅಲ್ಲ. ಮನುಷ್ಯ ಹೇಗೆ ಬದುಕಬೇಕು ಎಂಬುದರ ಆಕರ ಗ್ರಂಥವೇ ಕುರ್ ಆನ್ ಎಂದು ಹಿರಿಯ ರಂಗಕರ್ಮಿ, ಸಾಹಿತಿ ಯೋಗೇಶ ಮಾಸ್ಟರ್ ತಿಳಿಸಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಆಯೋಜಿಸಿದ್ದ ಪ್ರವಾದಿ ಜೀವನದ ಸಂದೇಶ ಅಭಿಯಾನ ಅಂಗವಾಗಿ ನಗರದ ಸಂಗಂತ್ರಾಸ ವಾಡಿಯಲ್ಲಿರುವ ಇದಾಯತ್ ಸೆಂಟರ್ ನಲ್ಲಿ ರವಿವಾರ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ ಅವರ ಕುರಿತ ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂದೂ- ಮುಸ್ಲಿಮರೆಲ್ಲರೂ ಸೇರಿ ಹೋರಾಟ ಮಾಡಿರುವುದು ಚಾರಿತ್ರಿಕ ಮಹತ್ವ ಪಡೆದಿದೆ ಎಂದು ತಿಳಿಸಿದರು.
ಅಂದು ಪರಕೀಯರ ವಿರುದ್ಧ ಹೋರಾಡಿದ ನಾವುಗಳು ಇಂದು ಪರಕೀಯ ಭಾವದ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂದು ಯೋಗೇಶ ಮಾಸ್ಟರ್ ಅವರು ವಿಷಾದ ವ್ಯಕ್ತಪಡಿಸಿದರು.
ನಮ್ಮವರ ಮಧ್ಯೆ ನಾವೇ ಹೋರಾಡಬೇಕಾದ ಅನಿವಾರ್ಯ ಪರಿಸ್ಥಿಗೆ ಪ್ರವಾದಿ ಮುಹಮ್ಮದ್ ಅವರು ಬೋಧಿಸಿದ ಅರಿವಿನ ಹೋರಾಟ ಆರಂಭಿಸುವುದಕ್ಕೆ ಇದು ಸಕಾಲ. ಅರಿವಿನ ಹೋರಾಟದಿಂದ ಇಂದಿನ ವರ್ತಮಾನ ಹಾಗೂ ಮುಂದಿನ ಭವಿಷ್ಯ ಶಾಂತಿ ನೆಮ್ಮದಿಯಿಂದ ಕೂಡಿರಲು ಸಾಧ್ಯ ಅವರು ಎಂದು ತಿಳಿಸಿದರು.
ಪ್ರವಾದಿಗಳು ಸರ್ವ ಜನಾಂಗದ ಮಾದರಿ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಜ್ಞಾನವನ್ನು ಹಂಚಿಕೊಳ್ಳುವುದು ಹಕ್ಕು ಹಾಗೂ ಕರ್ತವ್ಯ ಕೂಡ ಎಂದು ಯೋಗೇಶ ಮಾಸ್ಟರ್ ವಿವರಿಸಿದರು.
ಅತಿಥಿಯಾಗಿದ್ದ ವಕೀಲರಾದ ಅಶ್ವಿನಿ ಮದನಕರ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಪ್ರವಾದಿ ಮುಹಮ್ಮದ್ ರ ವಿಚಾರಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಎಲ್ಲರೂ ಸಮಾನತೆಗಾಗಿ ಕನಸು ಕಟ್ಟಿದ್ದವರು ಎಂದು ತಿಳಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಸಮ ಕುಲಪತಿ ವೈ.ಡಿ.ಮೈತ್ರಿ ಅವರು ಯೋಗೇಶ್ ಮಾಸ್ಟರ್ ರಚಿಸಿದ ನನ್ನ ಅರಿವಿನ ಪ್ರವಾದಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, ಹಿಂದೂ ಮುಸ್ಲಿಮರು ಸಹೋದರರಾಗಿರಬೇಕು ಎಂದು ಹೇಳಿದ ಪ್ರವಾದಿ ಮುಹಮ್ಮದ್‍ರು ಮಾನವೀಯತೆಯ ಪಾಠ ಕಲಿಸಿದ ಮಹಾನ್ ಸಂತ. ಅಲ್ಲದೆ, ವ್ಯಕ್ತಿಗತ ಮನಸ್ಥಿತಿ ಉನ್ನತವಾಗಲು ಮುಹಮ್ಮದ್‍ರ ಜೀವನ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷ ಜಾಕೀರ್ ಹುಸೇನ್, ಜಿಲ್ಲಾ ಸಂಚಾಲಕ ಮಜ್ಹಾರೊದ್ದೀನ್, ರೋಜಾ ಮಠದ ಗುರುಬಸವ ಸ್ವಾಮೀಜಿ ವೇದಿಕೆಯಲ್ಲಿದ್ದರು. ಅಬ್ದುಲ್ ಖಾದರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಪ್ರವಾದಿ ಮುಹಮ್ಮದ್‍ರು ಮಹಿಳೆಯರಿಗೆ ಜೀವಿಸುವ ಹಕ್ಕು ಹಾಗೂ ಆಸ್ತಿಯ ಹಕ್ಕು ಕಲ್ಪಸಿದ್ದರು. ಸಮಾನತೆಯ ಸಮಾಜ ಕಟ್ಟಲು ಅವರು ಮಹತ್ತರ ಕೊಡುಗೆ ನೀಡಿದ್ದಾರೆ.
-ಅಬ್ದುಲ್ ಖಾದರ್, ಕಾರ್ಯಕ್ರಮ ಸಂಚಾಲಕ