ನಾಡಿನ ಸೂಫಿ ಪರಂಪರೆ, ಭಾವೈಕ್ಯತೆಗೆ ಸೈಯದ್ ಶಾಹ್ ಖುಸ್ರೋ ಅವರ ಕೊಡುಗೆ ಅಪಾರ : ಪ್ರಿಯಾಂಕ್ ಖರ್ಗೆ
ಕಲಬುರಗಿ : ಹಝ್ರತ್ ಖ್ವಾಜಾ ಬಂದೇ ನವಾಜ್ ದರ್ಗಾದ ಗುರುಗಳು ಆದ ಡಾ.ಸೈಯದ್ ಶಾಹ್ ಖುಸ್ರೋ ಹುಸೈನಿ ಅವರ ನಿಧನದ ಸುದ್ದಿಯು ನನ್ನಲ್ಲಿ ಅತ್ಯಂತ ನೋವುಂಟು ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಡಾ.ಸೈಯದ್ ಶಾಹ್ ಖುಸ್ರೋ ಹುಸೈನಿ ಅವರ ಅಂತಿಮ ದರ್ಶನಕ್ಕಾಗಿ ಆಗಮಿಸಿದ ಬಳಿಕ ಮಾತನಾಡಿದ ಅವರು, ಡಾ.ಸೈಯದ್ ಶಾಹ್ ಖುಸ್ರೋ ಹುಸೈನಿ ಅವರು ನಾಡಿನ ಸೂಫಿ ಪರಂಪರೆಗೆ, ಭಾವೈಕ್ಯತೆಯ ಪರಂಪರೆಗೆ ಅವರು ನೀಡಿದ ಕೊಡುಗೆ ಅಪಾರವಾದುದು. ಅವರೊಂದಿಗಿನ ಒಡನಾಟವು ನನ್ನಲ್ಲಿ ಸ್ಫೂರ್ತಿ ತುಂಬುತ್ತಿತ್ತು, ಸೂಫಿ ತತ್ವಗಳಿಂದ ಸಮಾಜಕ್ಕೆ ಆದ್ಯಾತ್ಮಿಕ ಮಾರ್ಗದರ್ಶನ ನೀಡುವುದರ ಜೊತೆ ಜೊತೆಗೆ ವೈಜ್ಞಾನಿಕ ಮನೋಭಾವದಿಂದಲೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಿಕ್ಷಣದಿಂದ ಸಮಾಜದ ಏಳಿಗೆಗೆ ಶ್ರಮಿಸಿದ ಅವರ ಸಮಾಜಮುಖಿ ಕಾಳಜಿಯು ಸದಾ ಸ್ಮರಣಿಯವಾದುದು. ಜಿಲ್ಲೆಯಲ್ಲಿ ಶರಣ ಗುಡಿಯೊಂದಿಗೆ ಬಂದೇ ನವಾಜ್ ದರ್ಗಾವನ್ನು ಬೆಸೆದು ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಅವರ ಕಾರ್ಯಗಳು ನೆನಪಿನಲ್ಲಿ ಉಳಿಯುವಂತದ್ದು ಎಂದರು.
ಅವರ ಅಗಲಿಕೆಯಿಂದ ದುಃಖಿತನ್ನಾಗಿದ್ದೇನೆ, ಅವರ ಬಂಧುಗಳು, ಅನುಯಾಯಿಗಳ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಶರಣಪ್ರಕಾಶ ಪಾಟೀಲ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಝ್ ಫಾತೀಮಾ, ಕುಡಾ ಅಧ್ಯಕ್ಷರಾದ ಮಜರ್ ಅಲಾಂ ಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ನಗರ ಪೊಲೀಸ್ ಕಮೀಷನರ್ ಡಾ ಶರಣಪ್ಪ , ಎಸ್ ಪಿ ಅಡ್ಡೂರು ಶ್ರೀನಿವಾಸಲು, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮೀಷನರ್ ಭುವನೇಶ್ ಪಾಟೀಲ್ ಸೇರಿದಂತೆ ಹಲವರು ಇದ್ದರು.