ಆಳಂದಕ್ಕೆ ಜಿಲ್ಲಾಧಿಕಾರಿ ಭೇಟಿ ; ಶಾಲಾ ಮಕ್ಕಳೊಂದಿಗೆ ಸಂವಾದ, ಅಧಿಕಾರಿಗಳೊಂದಿಗೆ ಸಭೆ
ಕಲಬುರಗಿ : ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಬುಧವಾರ ಆಳಂದ ತಾಲೂಕಿಗೆ ಭೇಟಿ ನೀಡಿ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸುವುದರ ಜೊತೆಗೆ ಆಳಂದ ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದು ಅವರೊಂದಿಗೆ ಸಂವಾದ ನಡೆಸಿದರು.
ಜಿಲ್ಲಾಧಿಕಾರಿಗಳು ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಐ.ಎ.ಎಸ್., ಐ.ಪಿ.ಎಸ್, ಐ.ಎಫ್.ಎಸ್, ಕೆ.ಎ.ಎಸ್ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಆಗಾಗ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳ ಅಹವಾಲು ಆಲಿಸುವುದಲ್ಲದೆ ಅವರ ಮುಂದಿನ ಶೈಕ್ಷಣಿಕ ಭವಿಷ್ಯ ಉತ್ತಮವಾಗಿಸುವ ಸಲುವಾಗಿ "ಸ್ಪೂರ್ತಿ ಕಿರಣ" ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಅದರಂತೆ ಬುಧವಾರ ಶಾಲಾ ಮಕ್ಕಳೊಂದಿಗೆ ಅವರು ಬೆರೆತರು.
ಮಕ್ಕಳೊಂದಿಗೆ ಮಾತುಕತೆ ನಡೆಸುತ್ತಾ ಅವರ ಮುಂದಿನ ಶಿಕ್ಷಣ, ಗುಣಮಟ್ಟದ ಕಲಿಕೆ, ಜ್ಣಾನ ಸಂಗ್ರಹಣೆ ಸೇರಿದಂತೆ ವಿವಿಧ ವಿಷಯಗಳನ್ನು ಮಕ್ಕಳೊಂದಿಗೆ ಮುಕ್ತವಾಗಿ ಚರ್ಚಿಸಿ ಜೀವನದಲ್ಲಿ ಏನಾದರೂ ಸಾಧಿಸಿಬೇಕಾದರೆ ಕಠಿಣ ಪರಿಶ್ರಮ ಅಗತ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಇದಕ್ಕೂ ಮುನ್ನ ಆಳಂದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಲಾಖಾವಾರು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಕಾಲಮಿತಿಯಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ನಂತರ ಜಿಲ್ಲಾಧಿಕಾರಿಗಳು ಆಳಂದ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ರೈತರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ವಿಚಾರಿಸಿದರು. ಪಟ್ಟಣದ ಬಿ.ಸಿ.ಎಂ. ಇಲಾಖೆಯ ಮೆಟ್ರಿಕ್ ನಂತರ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿ ನಿಲಯಾರ್ಥಿಗಳೊಂದಿದೆ ಚಹಾ ಸವಿದ ಅವರು, ಹಾಸ್ಟೆಲ್ ನಲ್ಲಿ ನೀಡಲಾಗುತ್ತಿರುವ ಊಟ, ವಸತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ವಸತಿ ನಿಲಯದಲ್ಲಿ ಶುಚಿತ್ವ ಮತ್ತು ನೈರ್ಮಲ್ಯದಿಂದ ಕಾಪಾಡಿಕೊಳ್ಳುವಂತೆ ವಾರ್ಡನ್ ಅವರಿಗೆ ನಿರ್ದೇಶನ ನೀಡಿದರು.
ಪಟ್ಟಣದಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೂ ಡಿ.ಸಿ. ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಅಣ್ಣಾರಾವ ಪಾಟೀಲ, ತಾಲೂಕು ಪಂಚಾಯತ್ ಇ.ಓ ಮಾನಪ್ಪ ಕಟ್ಟಿಮನಿ, ಆಳಂದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಸೇರಿದಂತೆ ಇತರೆ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.