ಕಲಬುರಗಿ | ಬಸವೇಶ್ವರ ಆಸ್ಪತ್ರೆಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಂಜುಳಾ ಮಂಗಾಣೆ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಅಪ್ಜಲಪೂರ ತಾಲೂಕಿನ ಕರ್ಜಗಿ ಹಾಗೂ ಮಾಶಾಳ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಸುಮಾರು 125 ಜನರು ಇದರ ಸದುಪಯೋಗ ಪಡೆದುಕೊಂಡರು. ಈ ಶಿಬಿರದಲ್ಲಿ 45 ಜನರಿಗೆ ಕಣ್ಣಿನ ಪೊರೆ, ಕಣ್ಣಿನ ದುರ್ಮಾಂಸ, ಕುಣಕಿ ಚೀಲ ಸಮಸ್ಯೆ ಇರುವುದನ್ನು ಪತ್ತೆ ಹಚ್ಚಲಾಯಿತು.
ಈ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದು, ಇದನ್ನು ಉಚಿತವಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಮಾಡಿ ಅವರಿಗೆ ಅವಶ್ಯಕತೆ ಇರುವ ಔಷಧಿ, ಮಾತ್ರೆಗಳನ್ನು ಹಾಗೂ ಕನ್ನಡಕವನ್ನು ಉಚಿತವಾಗಿ ವಿತರಿಸಲಾಯಿತು.
ಚಿಕಿತ್ಸೆ ನಂತರ ಮಾತನಾಡಿದ ವೈದ್ಯರು, ಸಂಸ್ಥೆಯ ಅಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಸಂಚಾಲಕರಾದ ಡಾ.ಕಿರಣ್ ದೇಶಮುಖ್, ಆಡಳಿತ ಮಂಡಳಿಯ ಸದಸ್ಯರು ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ್, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ವೈದ್ಯಾಧಿಕಾರಿಗಳಾದ ಡಾ.ಆನಂದ ಗಾರಂಪಳ್ಳಿ, ಆಡಳಿತಾಧಿಕಾರಿಗಳಾದ ಡಾ.ಎಂ ಆರ್ ಪೂಜಾರಿ ನಮಗೆ ಸದಾ ಬೆನ್ನೆಲುಬಾಗಿ ನಿಂತಿರುವುದರಿಂದ ನಮ್ಮ ಶಿಬಿರಗಳು ಯಶಸ್ವಿಯಾಗುತ್ತಿವೆ ಎಂದರು.
ಬಸವೇಶ್ವರ ಆಸ್ಪತ್ರೆಯಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರಿಗೆ ಎಲ್ಲಾ ವಿಭಾಗಗಳಿಂದ ಅನಕೂಲವಾಗುತ್ತಿವೆ ಎಂದು ಹೇಳಿದರು.