ಕಲಬುರಗಿ | ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

Update: 2025-04-07 21:03 IST
Photo of Metting
  • whatsapp icon

ಕಲಬುರಗಿ : ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವಂತೆ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಮತ್ತು ಬಿಸಿಗಾಳಿ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕುರಿತು ಮುಂಜಾಗ್ರತೆ ಕ್ರಮಗಳು ಕೈಗೊಳ್ಳುವ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಟಾಸ್ಕ್ ಫೋರ್ಸ್ ಸಭೆಯ ನಡಾವಳಿ ಅನುಮೋದನೆ ಪಡೆದು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದರು.

ಕುಡಿಯುವ ನೀರು ಪೂರೈಕೆ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಬೇಕು. ಇದರಲ್ಲಿ ವಿಳಂಬ ಧೋರಣೆಯನ್ನು ಸಹಿಸಲಾಗುವುದಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಕರೆಗಳಿಗೆ ಸ್ಪಂದಿಸದಿದ್ದರೆ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನಾಡಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಈಗಾಗಲೆ ಮುಖ್ಯಮಂತ್ರಿ ಸಿದ್ದದ್ರಾಮಯ್ಯ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ನೀರು ಬಿಡುಗಡೆ ಮಾಡುವ ಸಂಪೂರ್ಣ ಆಶಾಭಾವನೆ ಹೊಂದಲಾಗಿದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಲಬುರಗಿ ನಗರದಲ್ಲಿ ಎಲ್ಲಿಯೇ ನೀರಿನ ಸಮಸ್ಯೆ ತಲದೋರಿದಲ್ಲಿ ಕೂಡಲೆ ಟ್ಯಾಂಕರ್ ಮೂಲಕ ಪೂರೈಸಬೇಕು ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಸೂಚನೆ ನೀಡಿದರು.

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಬದಲಾಗಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಸರಬರಾಜು ಮಾಡುವ ನೀರು ಮಲಿನದಿಂದ ಕೂಡಿರುತ್ತದೆ. ಈ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಅಧಿಕಾರಿಗಳನ್ನು ಕರೆದು ಎಚ್ಚರಿಕೆ ನೀಡಿದ್ದಾರೆ ಎಂದು ಶಾಸಕ ಹಾಗೂ ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿರುವ ಬಿ.ಆರ್. ಪಾಟೀಲ್ ಅವರು ಸಭೆಯ ಗಮನಕ್ಕೆ ತಂದು ಸಮಸ್ಯೆ ಯಾವಾಗ ಪರಿಹಾರ ನೀಡಲಾಗುತ್ತದೆ ಎಂದು ಪ್ರಶ್ನಿಸಿದರು. ಆಗ ಪಾಲಿಕೆ ಆಯಕ್ತರು ಮತ್ತು ಕೆ.ಯು.ಐ.ಡಿ.ಎಫ್.ಸಿ. ಅಧಿಕಾರಿಗಳು ಮಾತನಾಡಿ, ಮುಂದಿನ ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಉತ್ತರ ನೀಡಿದರು.

ಹಳ್ಳಿಗಳಲ್ಲಿ ಕಡಿಯುವ ನೀರಿನ ಚರ್ಚೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 15 ಗ್ರಾಮ ಪಂಚಾಯತಿಯ 18 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 17ರಲ್ಲಿ ಖಾಸಗಿ ಬೋರವೆಲ್ ಮೂಲಕ ಮತು ಒಂದು ಹಳ್ಳಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಸಂಭಾವ್ಯ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ಮಾಲಾಗಿದ್ದು, 295 ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಪ್ರಸ್ತುತ 787 ಬೋರವೆಲ್ ಚಾಲ್ತಿಯಲ್ಲಿದ್ದು, 363 ಬೋರ್‌ ವೆಲ್ ಫ್ಲಶ್ ಮಾಡಿದಲ್ಲಿ ನೀರು ಸಿಗಲಿದೆ. ಇನ್ನು 345 ಖಾಸಗಿ ಬೋರವೆಲ್ ಬಾಡಿಗೆ ಪಡೆಯಲು ಈಗಾಗಲೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ್ ದೌಲಾ ಮಾತನಾಡಿ, 12 ಪೌರ ಸಂಸ್ಥೆಗಳ 228 ವಾರ್ಡ್ ಗಳಿದ್ದು, ಯಡ್ರಾಮಿ ಪಟ್ಟಣ ಪಂಚಾಯತ್‌ ಹೊರತುಪಡಿಸಿದರೆ ಉಳಿದಡೆ ಅಷ್ಟೊಂದು ನೀರಿನ ಸಮಸ್ಯೆ ಇಲ್ಲ. ಆಳಂದ, ಅಫಜಲಪೂರ ಪಟ್ಟಣಕ್ಕೆ ನೀರು ಪೂರೈಸಲು ನೀರು ಸಂಗ್ರಹ ಇದೆ ಎಂದರು.

ಬೆಳೆ ವಿಮೆ ನೋಂದಣಿಗೆ ಒತ್ತು ಕೊಡಿ :

ಕಳೆದ 2024-25ನೇ ಸಾಲಿನಲ್ಲಿ ಬೆಳೆ ವಿಮೆಯಡಿ ಸ್ಥಳೀಯ ವಿಪತ್ತು ಪರಿಹಾರದಲ್ಲಿ 76.35 ಕೋಟಿ ರೂ. ಮತ್ತು ಕಟಾವು ಹಂತದಲ್ಲಿನ ಬೆಳೆ ನಷ್ಟಕ್ಕೆ 577.92 ಕೋಟಿ ರೂ. ಸೇರಿ 2 ಲಕ್ಷ ಮೇಲ್ಪಟ್ಟ ರೈತರಿಗೆ ದಾಖಲೆ ಪ್ರಮಾಣದಲ್ಲಿ 654 ಕೋಟಿ ರೂ. ಪರಿಹಾರ ಜಿಲ್ಲೆಗೆ ದೊರಕಿಸಿದರು, ಸಹ ಸುಮಾರು 2 ಲಕ್ಷ ಅನ್ನದಾತರು ಬೆಳೆ ವಿಮೆ ಮಾಡಿಕೊಳ್ಳದ ಕಾರಣ ಪರಿಹಾರದಿಂದ ವಂಚಿತರಾಗಿದ್ದಾರೆ. ಪ್ರತಿ ವರ್ಷ ಸರ್ಕಾರದ ಬಳಿ ಬೆಳೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಕಷ್ಟವಾಗಲಿದೆ. ಹೀಗಾಗಿ ಪ್ರಸಕ್ತ 2025-26ನೇ ಸಾಲಿಗೆ ಬೆಳೆ ವಿಮೆ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೊಂದಣಿ ಮಾಡಲು ಕೃಷಿ ಇಲಾಖೆಯು ಹೆಚ್ಚಿನ ಒತ್ತು ನೀಡಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯು ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪೋಸ್ಟರ್ ಬಿಡುಗಡೆ :

ಇದೇ ಸಂದರ್ಭದಲ್ಲಿ ಬೇಸಿಗೆಯ ಬಿಸಿಲಿನಿಂದ ರಕ್ಷಣೆಯ ಮಾರ್ಗೋಪಾಯಗಳು ಕುರಿತು ಜಿಲ್ಲಾ ವಿಪತ್ತು ನಿರ್ವಹನಾ ಪ್ರಾಧಿಕಾರವು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಿದ್ದಪಡಿಸಿರುವ ಪೋಸ್ಟರ್ ಮತ್ತು ಎ.16 ರಂದು ಕಲಬುರಗಿಯಲ್ಲಿ ನಡೆಯುವ ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳದ ಪೋಸ್ಟರ್‌ಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಆದಿಯಾಗಿ ಶಾಸಕರು ಬಿಡುಗಡೆಗೊಳಿಸಿದರು. ಇನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಕುರಿತು ಹೆಚ್ಚಿನ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಈ ಸಂದರ್ಭದಲಿ ಕರ್ನಾಟಕ ರೇಷ್ಮೆ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ, ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News