ಕಲಬುರಗಿ | ಜಲ ಸುರಕ್ಷಿತ ಗ್ರಾಮ : ಸಿಡಿಡಿ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಜಿಲ್ಲಾ ಪಂಚಾಯತ್ ಸಹಿ

Update: 2025-04-07 21:08 IST
ಕಲಬುರಗಿ | ಜಲ ಸುರಕ್ಷಿತ ಗ್ರಾಮ : ಸಿಡಿಡಿ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಜಿಲ್ಲಾ ಪಂಚಾಯತ್ ಸಹಿ
  • whatsapp icon

ಕಲಬುರಗಿ : ಜಲ ಸಂರ‍್ಷಣೆ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ 10 ಮಾದರಿ ಹಳ್ಳಿಗಳನ್ನು ರೂಪಿಸಲು ಸೋಮವಾರ ಕಲಬುರಗಿ ಜಿಲ್ಲಾ ಪಂಚಾಯತಿಯು ಕನ್ಸೋರ್ಟಿಯಂ ಫಾರ್ ಡಿಯಾಟ್ಸ್ ಡಿಸೆಮಿನೇಷನ್ (ಸಿಡಿಡಿ) ಸಂಸ್ಥೆ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮಕ್ಷಮ ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಮತ್ತು ಸಿಡಿಡಿ. ಸಂಸ್ಥೆಯ ಅಧಿಕಾರಿ ಯೋಗೇಶ ಅವರು ಒಪ್ಪಂದಕ್ಕೆ ಸಹಿ ಮಾಡಿಕೊಂಡು ಪರಸ್ಪರ ಪತ್ರ ವಿನಿಮಯ ಮಾಡಿಕೊಂಡರು.

ಹಳ್ಳಿಗಳಲ್ಲಿ ನೀರಿನ ಸಂಪತ್ತು ಸಂರಕ್ಷಣೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆ, ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ, ಮಳೆ ನೀರು ಸಂಗ್ರಹಣೆ ಸೇರಿದಂತೆ ಗ್ರಾಮಸ್ಥರ ಭಾಗವಗಹಿಸುವಿಕೆಯಿಂದ ವಿವಿಧ ಚಟುವಟಿಕೆಗಳನ್ನು ಸಮಪರ್ಕವಾಗಿ ಅನುಷ್ಠಾನದ ಗುರಿ ಈ ಒಪ್ಪಂದ ಹೊಂದಿದೆ.

ವಿಶೇಷವಾಗಿ ಕೆರೆ-ಕಟ್ಟೆಗಳಲ್ಲಿ ಕೊಳಚೆ ತೆಗೆಯುವ ಮೂಲಕ ಮತ್ತು ಬೌದ್ಧಿಕ ಸುಧಾರಣೆಗಳಿಂದ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಜಲಾಶಯಗಳಾದ ಕೆರೆ, ಚೆಕ್ ಡ್ಯಾಂಗಳನ್ನು ಸಂರಕ್ಷಿಸಿ ಅದರ ಸಾಮರ್ಥ್ಯ ಹೆಚ್ಚಿಸುವುದು. ಜಲಜೀವಿಗಳ ಜೀವ ವೈವಿಧ್ಯತೆ ಸಂರಕ್ಷಣೆ ಜೊತೆಗೆ ಪರಿಸರ ಸೇವೆಗಳ ಸುಧಾರಣೆ, ನೀರಿನ ಮೂಲಗಳ ಸುತ್ತಮುತ್ತ ನವೋತ್ಪಾದನೆ ಮತ್ತು ವೃಕ್ಷ ಸಂಗೋಪನೆ ಮೂಲಕ ಮಣ್ಣಿನ ದೂಷಣ ನಿಯಂತ್ರಣ ಸಾಧಿಸುವುದು ಸೇರಿ ಒಟ್ಟಾರೆಯಾಗಿ ಜಲ ಸಂರಕ್ಷಣೆ ಸಮುದಾಯದ ಜವಾಬ್ದಾರಿ ಎಂಬುದು ಸಾರಿ ಹೇಳುವುದಾಗಿದೆ.

ವೈಜ್ಞಾನಿಕವಾಗಿ ತ್ಯಾಜ್ಯ ನೀರು ಸಂಸ್ಕರಣೆಗೊಳಿಸುವುದು, ಶಾಲಾ ನೈರ್ಮಲ್ಯ, ಸಾರ್ವಜನಿಕ ತ್ಯಾಜ್ಯದ ಕೊಳಚೆ ಪ್ರದೇಶಗಳು, ಬ್ಲ್ಯಾಕ್ ಸ್ಪಾಟ್‌ಗಳನ್ನು ಕಂಡುಹಿಡಿದು ಸಾಂಸ್ಥಿಕ ಸಾಮರ್ಥ್ಯಗಳ ವಿಶ್ಲೇಷಿಸುವುದಾಗಿದೆ. ಇದಲ್ಲದೆ ಗ್ರಾಮದಲ್ಲಿನ ಮೂಲಸೌಕರ್ಯ ಬಲವರ್ಧನೆಗೆ ಇರುವ ಕೊರತೆಗಳನ್ನು ಪತ್ತೆ ಹಚ್ಚಿ ಸರ್ಕಾರದ ವಿವಿಧ ಇಲಾಖೆಯ ಅನುದಾನದಿಂದ ಅದನ್ನು ಸರಿಪಡಿಸುವ ಕೆಲಸ ಇಲ್ಲಿ ಆಗಲಿದೆ.

ಒಪ್ಪಂದದ ಪ್ರಕಾರ 10 ಹಳ್ಳಿಗಳಲ್ಲಿ ಗ್ರೇವಾಟರ್ ಶುದ್ಧಿಕರಣ ಘಟಕ ತಾಂತ್ರಿಕ ಯೋಜನೆ ಮತ್ತು ಡಿ.ಪಿ.ಆರ್. ಸಿದ್ದಪಡಿಸಿ ಇದರಲ್ಲಿ 3 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಘಟಕ ಸ್ಥಾಪಿಸುವುದು. 5 ಹಳ್ಳಿಗಳಲ್ಲಿ ಶಾಲಾ ನೈರ್ಮಲ್ಯಗಳ ವ್ಯವಸ್ಥೆಯನ್ನು ಪುನ:ಸ್ಥಾಪಿಸುವುದು ಹಾಗೂ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿದೆ.

ಒಟ್ಟಾರೆಯಾಗಿ ಮಾದರಿ ಹಳ್ಳಿ ರೂಪಿಸುವ ನಿಟ್ಟಿನಲ್ಲಿ ಜಲ, ಪರಿಸರ ಸಂರಕ್ಷಣೆ ಜೊತೆಗೆ ಸ್ಥಳೀಯ ಸಮಸ್ಯೆಳಿಗೆ ಪರಿಹಾರ ಕಂಡುಕೊಳ್ಳುವುದು, ಕಾಲ-ಕಾಲಕ್ಕೆ ಪಂಚಾಯತಿ ಸಿಬ್ಬಂದಿಗಳಿಗೆ ತರಬೇತಿ ಮತ್ತು ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಸ್ಥಳೀಯ ಅಗತ್ಯಗಳನ್ನು ಪೂರೈಸಲು ತಂತ್ರಜ್ಞಾನದ ಸದ್ಬಳಕೆ ಮಾಡುವುದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೆರೆ, ಗೋಕಟ್ಟೆ, ಪುಷ್ಕರಣಿ, ಬಾವಿ ಹೀಗೆ ನಾನಾ ತರಹದ ಜಲಮೂಲಗಳನ್ನು ಸಂರಕ್ಷಣೆ ಜೊತೆಗೆ ಕೆರೆ, ಚೆಕ್ ಡ್ಯಾಂ ನಿರ್ಮಿಸುವ, ಆರೋಗ್ಯ ನೈರ್ಮಲ್ಯ ಕಾಪಾಡುವ, ಪರಿಸರಕ್ಕೆ ಪೂರಕವಾಗಿ ಅನೇಕ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದೊಂದಿಗೆ ಪ್ರಾಯೋಗಿಕವಾಗಿ 10 ಹಳ್ಳಿಗಳನ್ನು ಮಾದರಿ ಹಳ್ಳಿಯಾಗಿ ರೂಪಿಸಲು ಇಂದಿಲ್ಲಿ ಒಪ್ಪಂದ ಮಾಡಿಕೊಂಡಿದೆ. ಇದರ ಫಲಿತಾಂಶದ ಆಧಾರದ ಮೇಲೆ ಜಿಲ್ಲೆಯ ಇತರೆ ಹಳ್ಳಿಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದರು.

ಮೈಕ್ರೋ ಗ್ರಿಡ್ ಪ್ಲ್ಯಾಂಟ್ ಸ್ಥಾಪನೆ :

ರಾಜ್ಯದ ಗ್ರಾಮೀಣ ಪ್ರದೇಶವು 3,500 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಹೊಂದಿದೆ. ಸೌರ ಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸಿ ಪೂರೈಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹಳ್ಳಿಗಳಲ್ಲಿ ಮೈಕ್ರೋ ಗ್ರಿಡ್ ಪ್ಲ್ಯಾಂಟ್ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ 20 ಕೋಟಿ ರೂ. ಹಣ ಮೀಸಲಿಟ್ಟಿದ್ದು, ಒಂದು ತಿಂಗಳಲ್ಲಿ ಟೆಂಡರ್ ಕರೆದು ಕೆಲಸ ಪ್ರಾರಂಭಿಸಲಾಗುವುದು. ಮುಂದಿನ ಒಂದೂವರೆ ವರ್ಷ ಅವಧಿಯಲ್ಲಿ ದೇಶದಲ್ಲಿ ಪ್ರಪ್ರಥಮ ಬಾರಿಗೆ ಮೈಕ್ರೋ ಗ್ರಿಡ್ ಹೊಂದಿದ ಹಳ್ಳಿಗಳು ನಮ್ಮ ಕಲಬುರಗಿ ಜಿಲ್ಲೆಯ ಗ್ರಾಮಗಳಾಗಿರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್‌, ಕರ್ನಾಟಕ ರೇಷ್ಮೆ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಶಾಸಕರಾದ ಎಂ.ವೈ.ಪಾಟೀಲ್‌, ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ, ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ್‌, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News