ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ: ಸ್ಮಾರ್ಟ್ ಫೋನ್ ಬಳಕೆ, ಮದ್ಯಪಾನದ ವಿಡಿಯೋ ವೈರಲ್

Update: 2024-12-06 05:43 GMT

ಕಲಬುರಗಿ: ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೆ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನುವ ವಿಚಾರಕ್ಕೆ ಕಲಬುರಗಿ ಕೇಂದ್ರ ಕಾರಾಗೃಹ ರಾಜ್ಯದಲ್ಲಿ ಸುದ್ದಿಯಲ್ಲಿತ್ತು. ಮತ್ತೆ ಇಂತಹದ್ದೇ ಘಟನೆಗೆ ಕೇಂದ್ರ ಕಾರಾಗೃಹ ಸಾಕ್ಷಿಯಾಗಿದ್ದು, ವಿಡಿಯೋಗಳು ಇದೀಗ ಮತ್ತೆ ವೈರಲ್ ಆಗಿವೆ.

ಕೈದಿಗಳು ಜೈಲಿನಲ್ಲಿ ರಾಜರೋಷವಾಗಿ ಸ್ಮಾರ್ಟ್ ಫೋನ್ ಬಳಸುವುದು, ಬೀಡಿ, ಗುಟ್ಕಾ, ಸಿಗರೇಟ್ ಹಾಗೂ ಕೈದಿಗಳು ಮದ್ಯಪಾನ ಮಾಡುವಂತಹ ವಿಡಿಯೋ ವೈರಲ್ ಆಗಿದ್ದು, ಇಷ್ಟೆ ಅಲ್ಲದೇ ಕೈದಿಗಳು ಜೈಲಿನ ಆಧೀಕ್ಷಕರಾದ ಡಾ. ಅನಿತಾ ಅರ್ ಹಣದ ಬೇಡಿಕೆ ಇಟ್ಟಿರುವ ಬಗ್ಗೆ ಮಾತಾಡುತ್ತಿದ್ದು, ಒಂದು ಕೈದಿ ಇನ್ನೊಂದು ಕೈದಿಗೆ 500 ರೂ. ನೋಟುಗಳನ್ನು ಎಣಿಸಿ ನೀಡುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.

ಕೆಲವು ದಿನಗಳ ಹಿಂದಷ್ಟೆ ಗುಣಮಟ್ಟ ಆಹಾರ ಕೇಳಿದಕ್ಕೆ ಕೈದಿಗೆ ಹಿಂಸೆ ನೀಡಿ ಹಣದ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಜೈಲಿನ ಅಧೀಕ್ಷಕರಾದ ಡಾ. ಅನಿತಾ ಆರ್ ವಿರುದ್ಧ ಹಲವರಿಗೆ ದೂರು ನೀಡಲಾಗಿತ್ತು. ಇದರ ಬೆನ್ನಲ್ಲೇ ಗುಣಮಟ್ಟ ಆಹಾರ ನೀಡುವಂತೆ ನೂರಾರು ಕೈದಿಗಳು ಕಾರಾಗೃಹದ ವ್ಯವಸ್ಥೆ ವಿರುದ್ಧ ಆಹಾರ ಸೇವಿಸದೇ ಪ್ರತಿಭಟನೆ ನಡೆಸಿದ್ದರು.

ಕಾರಾಗೃಹಕ್ಕೆ ಎಡಿಜಿಪಿ, ಜಿಲ್ಲಾಧಿಕಾರಿ, ನ್ಯಾಯಾಧೀಶರು ಆಗಮಿಸಿ ಸಮಸ್ಯೆ ಆಲಿಸಬೇಕೆಂದು ಪಟ್ಟುಬಿಡದೇ ಧರಣಿ ನಡೆಸಿ ಜೈಲರ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ಜಿಲ್ಲಾ ನ್ಯಾಯಧೀಶರಿಗೆ ಪತ್ರ ಬರೆದಿರುವುದು ವೈರಲ್ ಆಗಿತ್ತು. ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಮತ್ತು ಪಿಎ ಶ್ರೀಕಾಂತ್ ರಂಜೇರಿ ಅವರನ್ನು ಕೂಡಲೇ ವರ್ಗಾಯಿಸಬೇಕೆಂದು ನ್ಯಾಯಾಧೀಶರಿಗೆ, ಕೈದಿಗಳು ಸಹಿ ಹಾಕಿ ಬರೆದಿರುವ ಪತ್ರದಲ್ಲಿ ಹೇಳಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಾ. ಅನಿತಾ ಅವರು, ಜೈಲಿನಲ್ಲಿ ಕಠಿಣ ಕ್ರಮಕೈಗೊಂಡಿದಕ್ಕೆ ಕೈದಿಗಳು ಮಹಿಳೆಯರನ್ನು ಬಳಸಿಕೊಂಡು ಆಕ್ರಮವಾಗಿ ನನಗೆ ಹಣ ಹಾಕಿ ಬ್ಲಾಕ್ ಮೇಲ್ ಮಾಡುವ ಸಂಚು ನಡೆಸುತ್ತಿದ್ದಾರೆ. ಜೈಲಿನ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವುದರಿಂದ ಕೈದಿಗಳು ಗುಟ್ಕಾ, ಸಿಗರೇಟ್ ಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ. ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು.

ಕೇಂದ್ರ ಕಾರಾಗೃಹದ ಅಧೀಕ್ಷಕಿ ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಮತ್ತು ಕೈದಿಗಳ ಆರೋಪಗಳಿಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ 9 ಕೈದಿಗಳು ಸೇರಿದಂತೆ 11 ಮಂದಿ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಯಿತು.

ಈಗ ಮತ್ತೆ ಕಲಬುರಗಿ ಕೇಂದ್ರ ಕಾರಾಗೃಹದ್ದು ಎನ್ನಲಾದ ಕೈದಿಗಳು ಜೈಲಿನಲ್ಲಿ ರಾಜರೋಷವಾಗಿ ಸ್ಮಾರ್ಟ್ ಫೋನ್ ಬಳಸುವುದು, ಬೀಡಿ, ಗುಟ್ಕಾ, ಸಿಗರೇಟ್ ಹಾಗು ಕೈದಿಗಳು ಎಣ್ಣೆ ಪಾರ್ಟಿ ಮಾಡುವಂತಹ ವಿಡಿಯೋ ವೈರಲ್ ಆಗಿದ್ದು ಜೈಲಿನ ಅಧಿಕಾರಿಗಳ ನಡೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಈ ವಿಚಾರವಾಗಿ ಎಡಿಜಿಪಿ ಅವರ ಸ್ಪಷ್ಟನೆಗಾಗಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ. ಜಿಲ್ಲಾಧಿಕಾರಿ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News