ಕಲಬುರಗಿ | ನ್ಯಾಯಾಂಗ, ಮಾಧ್ಯಮ ಚಳಿ ಬಿಟ್ಟು ಕೆಲಸ ಮಾಡಿದಲ್ಲಿ ಸಮಾಜ ತಿದ್ದಲು ಸಾಧ್ಯ : ನ್ಯಾ.ಬಿ.ವೀರಪ್ಪ
ಕಲಬುರಗಿ : ಸಮಾಜದಲ್ಲಿ ಭ್ರಷ್ಟಾಚಾರ ಮುಗಿಲು ಮಟ್ಟಿದೆ. ಶಾಸಕಾಂಗ, ಕಾರ್ಯಾಂಗಗಳು ಹಳಿ ತಪ್ಪಿದ್ದು, ಹೀಗಾಗಿ ನ್ಯಾಯಾಂಗ, ಪತ್ರಿಕಾರಂಗ ಚಳಿ ಬಿಟ್ಟು ಕೆಲಸ ಮಾಡಿದಲ್ಲಿ ಈ ಎರಡು ಅಂಗಗಳನ್ನು ಸರಿಪಡಿಸಿ ಸಮಾಜ ತಿದ್ದಲು ಸಾಧ್ಯ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಹೇಳಿದ್ದಾರೆ.
ರವಿವಾರ ಕಲಬುರಗಿ ಡಿ.ಸಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪತ್ರ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಆಂದೋಲನ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗವು ಶಿಸ್ತು ಬದ್ಧವಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಲ್ಲಿ ಜನರಿಗೆ ಉತ್ತಮ ಸೇವೆ ಕೊಡಲು ಮತ್ತು ಆಡಳಿತಕ್ಕೆ ಚುರುಕು ಮುಟ್ಟಿಸಲು ಸಾಧ್ಯ ಎಂದ ಅವರು ಭ್ರಷ್ಟಾಚಾರ ನಿರ್ಮೂಲನೆ ತಾವು ಪಣತೊಟ್ಟಿದ್ದು ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸಂಘ-ಸಂಸ್ಥೆಗಳಿಗೆ ಎಚ್ಚರಿಕೆ :
ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 20 ಸಾವಿರ ಪ್ರಕರಣಗಳಿವೆ. ಇದರಲ್ಲಿ ಬಹುತೇಕ ಪ್ರಕರಣಗಳು ಮೇಲ್ನೋಟಕ್ಕೆ ಸುಳ್ಳು ಆರೋಪಗಳನ್ನು ಹೊಂದಿವೆ. ಶಾಸಕಾಂಗ, ಕಾರ್ಯಾಂಗದ ದಯನೀಯ ಸ್ಥಿತಿಯನ್ನು ಲಾಭ ಮಾಡಿಕೊಂಡ ಕೆಲ ಸಂಘ-ಸಂಸ್ಥೆಗಳು ಕೊಡೆಯಂತೆ ಬೆಳೆದುಕೊಂಡಿವೆ. ತಮ್ಮ ಕಾರಿನ ಮೇಲೆ ಸಂಘಟನೆ ನಾಮಫಲಕ ಹಾಕಿಕೊಂಡು ರಾಜಾರೋಷವಾಗಿ ತಿರುಗಾಡುತ್ತ ಅಧಿಕಾರಿಗಳನ್ನು ಹೆದರಿಸಿ ಬೆದರಸಿ ಹಣ ದೋಚುತ್ತಿದ್ದಾರೆ. ನಾನು ಲೋಕಾಯುಕ್ತ ಸಂಸ್ಥೆಗೆ ಬಂದ ಮೇಲೆ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಸಲ್ಲಿಕೆ ಕಡ್ಡಾಯ ಮಾಡಿದ್ದೇನೆ. ಸುಳ್ಳು ದೂರು ಕೊಟ್ಟರೆ 3 ವರ್ಷ ಜೈಲು ಶಿಕ್ಷೆ ಎಂದು ಈಗಾಗಲೇ ತಿಳಿಸಿದ್ದರಿಂದ ಸುಳ್ಳು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದ ಅವರು, ಸುಳ್ಳು ಪ್ರಕರಣಗಳನ್ನು ದಾಖಲಿಸುವ ಸಂಘ-ಸಂಸ್ಥೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ನ್ಯಾಯಮೂರ್ತಿ ಬಿ.ವೀರಪ್ಪ ಎಚ್ಚರಿಸಿದರು.
ಹಳ್ಳಿಗೆ ಹೋಗಿ ಅರಿವು ಮೂಡಿಸಿ :
ಗ್ರಾಮೀಣ ಭಾಗದ ಜನರಿಗೆ ಲೋಕಾಯುಕ್ತ, ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರದ ಬಗ್ಗೆ ಅರಿವಿನ ಕೊರತೆಯಿದೆ. ಜಿಲ್ಲೆಯಲ್ಲಿರುವ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿ-ಹಳ್ಳಿಗೆ ಸಂಚರಿಸಿ ಅರಿವು ಮೂಡಿಸಬೇಕು. ಲೋಕಾಯುಕ್ತ ಪೊಲೀಸರ ಸಹಕಾರ ಪಡೆದು ಹಾಸ್ಟೆಲ್, ಶಾಲೆ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಅವರಿಗೆ ಉಪ ಲೋಕಾಯುಕ್ತರು ನಿರ್ದೇಶನ ನೀಡಿದರು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಪರ ನಿಬಂಧಕರಾದ ಜೆ.ವಿ.ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಸೇರಿದಂತೆ ಜಿಲ್ಲೆಯ ವಿವಿಧ ಶ್ರೇಣಿಯ ನ್ಯಾಯಾಧೀಶರು ಭಾಗವಹಿಸಿದ್ದರು.