ದೇಶ ನಡೆಯುತ್ತಿರುವುದು ಸಂವಿಧಾನದಿಂದ ಹೊರತು, ಯಾವುದೇ ಧರ್ಮ ಗ್ರಂಥಗಳಿಂದಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಭಾರತ ದೇಶ ನಡೆಯುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಪವಿತ್ರ ಸಂವಿಧಾನದಿಂದ ಹೊರತು, ಯಾವುದೇ ಧರ್ಮ ಗ್ರಂಥಗಳಿಂದಲ್ಲ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದ ಎ.ಸಿ.ಸಿ. ಕಂಪನಿ ಗೇಟ್ ಆವರಣದಲ್ಲಿ ಆಯೋಜಿಸಿದ ಕಲಬುರಗಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಜಾಥಾದ ಸಮಾರೋಪ ಸಮಾರಂಭ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಪುರುಷ-ಮಹಿಳೆ, ಜಾತಿ-ವರ್ಣ, ಧರ್ಮ-ಪಂತ ಎಂಬ ಬೇಧವಿಲ್ಲದೆ ಸರ್ವರಿಗೆ ಸಮಾನ ಅವಕಾಶ ನೀಡಿರುವುದು ಸಂವಿಧಾನ. ದೇಶದಲ್ಲಿ 25 ಸಾವಿರ ಜಾತಿ-ಉಪ ಜಾತಿಗಳಿವೆ. ದೇಶದ ಪ್ರತಿ ಪ್ರಾಂತ್ಯ ನೋಡಿದಾಗ ರೀತಿ-ನೀತಿ, ಉಡುಗೆ-ತೊಡುಗೆ, ಧರ್ಮ ವಿಭಿನ್ನವಾಗಿದೆ. ಅಚಾರ ವಿಚಾರಗಳು ಬೇರೆ. ಇದರ ಹೊರತಾಗಿ ನಾವೆಲ್ಲರೂ ಭಾರತೀಯರು ಎಂದು ನಮ್ಮೆಲ್ಲರನ್ನು ಒಂದು ಗೂಡಿಸುತ್ತಿರುವುದು ನಮ್ಮ ಹೆಮ್ಮೆಯ ಸಂವಿಧಾನ ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಸರಕಾರ ಅಕ್ಷರಸ ಪಾಲಿಸುತ್ತಿದೆ. ಸರ್ವರಿಗೆ ಸಮಬಾಲು, ಸರ್ವರಿಗೆ ಸಮಪಾಲು ಎಂಬ ಧ್ಯೇಯ ಇಟ್ಟುಕೊಂಡು ನಾಡಿನ ಜನರ ಒಳಿತಿಗೆ ನಮ್ಮ ಸರಕಾರ ಶ್ರಮಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಒತ್ತಿ ಹೇಳಿದರು.
ಕೇಂದ್ರ ಸರಕಾರದ ಕೆಟ್ಟ ಆರ್ಥಿಕ ನೀತಿ ಕಾರಣ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ತರಲು ಮೂಲ ಕಾರಣವಾಗಿದೆ. ಮಹಿಳೆಯರಿಗೆ ಮನೆ ನಡೆಸಲು ತುಂಬಾ ಕಷ್ಟವಾಗಿತ್ತು. ಕೊರೋನಾ ಬಂದ ನಂತರವಂತೂ ಕಷ್ಟ ಹೇಳತೀರದು. ಇದನ್ನು ಅರಿತೇ ನಮ್ಮ ಸರಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ನಾಡಿನ ಪ್ರತಿ ಕುಟುಂಬ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ನಾಡಿನ ಜನರ ಆರ್ಥಿಕ ಸ್ಥಿರತೆ ಕಾಪಾಡುವುದೇ ನಮ್ಮ ಸರಕಾರದ ಮೂಲ ಉದ್ದೇಶವಾಗಿದೆ ಎಂದರು.
ಇಂದು ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಂಖ್ಯೆ 4.60 ಕೋಟಿಗೂ ಹೆಚ್ಚು. ಜಿಲ್ಲೆಯಲ್ಲಿ 5.25 ಲಕ್ಷ ಜನ ಗೃಹ ಲಕ್ಷ್ಮೀ, 5.50 ಲಕ್ಷ ಕುಟುಂಬಗಳು ಗೃಹ ಜ್ಯೋತಿ, 18 ಲಕ್ಷ ಜನ ಅನ್ನಭಾಗ್ಯ ಸವಲತ್ತು ಪಡೆಯುತ್ತಿದ್ದಾರೆ. ರಾಜ್ಯದಾದ್ಯಂತ 65 ಲಕ್ಷ ಜನ ಪ್ರತಿ ದಿನ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.