ಉದುಮ ಮಾಜಿ ಶಾಸಕ ಕೆ.ಪಿ.ಕು೦ಞಿಕಣ್ಣನ್ ನಿಧನ
ಕಾಸರಗೋಡು: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಉದುಮ ಮಾಜಿ ಶಾಸಕ ಕೆ.ಪಿ.ಕು೦ಞಿಕಣ್ಣನ್(75) ಗುರುವಾರ ಬೆಳಗ್ಗೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸೆ.4ರಂದು ರಾಷ್ಟ್ರೀಯ ಹೆದ್ದಾರಿಯ ನೀಲೇಶ್ವರ ಕರುವೆಚ್ಚರಿ ಪೆಟ್ರೋಲ್ ಬಂಕ್ ಸಮೀಪ ಕುಂಞಿಕಣ್ಣನ್ ಸಂಚರಿಸುತ್ತಿದ್ದ ಕಾರು ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿತ್ತು. ಈ ವೇಳೆ ಕುಂಞಿಕಣ್ಣನ್ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
1987ರಲ್ಲಿ ಉದುಮ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಸರಗೋಡು ಜಿಲ್ಲೆ ರಚನೆಯಾದ ಬಳಿಕ ಮೊದಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಕಡನ್ನಪಳ್ಳಿ ಸಹಕಾರಿ ಬ್ಯಾಂಕ್ ಅಧ್ಯಕ್ಷ , ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಪಯ್ಯನ್ನೂರು ಕಾಲೇಜು ಆಡಳಿತ ಸಮಿತಿಯ ಅಧ್ಯಕ್ಷ, ಕೆರಾಫೆಡ್ ನಿರ್ದೇಶಕ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೀಗೆ ವಿವಿಧ ಹುದ್ದೆಗಳನ್ನು ಅವರು ನಿರ್ವಹಿಸಿದ್ದರು.