ಕಾಸರಗೋಡು| ಅನಿವಾಸಿ ಉದ್ಯಮಿಯ ಕೊಲೆ ಪ್ರಕರಣ: ಮೂವರು ಮಹಿಳೆಯರು ಸೇರಿ ನಾಲ್ವರ ಬಂಧನ

Update: 2024-12-05 13:57 GMT

ಕಾಸರಗೋಡು : ಒಂದೂವರೆ ವರ್ಷಗಳ ಹಿಂದೆ ಬೇಕಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅನಿವಾಸಿ ಉದ್ಯಮಿಯ ಸಾವಿನ ಪ್ರಕರಣ ಕೊಲೆ ಎಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.

ಮೇಲ್ಪರಂಬ ಕುಳಿಕುನ್ನುವಿನ ಶಮೀಮಾ (38), ಆಕೆಯ ಪತಿ ಉಬೈದ್ (40), ಪೂಚಕ್ಕಾಡ್ ನ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40) ಬಂಧಿತರು ಎಂದು ಗುರುತಿಸಲಾಗಿದೆ.

ಪೂಚಕ್ಕಾಡ್ ನ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55) ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಮಹಿಳೆಯರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಚಿನ್ನಾಭರಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ವಾಮಾಚಾರದ ಹೆಸರಲ್ಲಿ ಸುಮಾರು 596 ಪವನ್ ಚಿನ್ನಾಭರವನ್ನು ಇವರು ಲಪಾಟಿಯಿಸಿದ್ದರು ಎನ್ನಲಾಗಿದ್ದು, ಬಳಿಕ ಚಿನ್ನಾಭರಣವನ್ನು ಗಫೂರ್ ಹಾಜಿ ಮರಳಿಸುವಂತೆ ಕೇಳಿದ್ದು, ಈ ಕಾರಣಕ್ಕಾಗಿ ಕೊಲೆ ನಡೆಸಿರುವುದಾಗಿ ತನಿಖಾ ತಂಡ ತಿಳಿಸಿದೆ.

2023 ರ ಏಪ್ರಿಲ್ 14 ರಂದು ಕೊಲೆ ನಡೆದಿತ್ತು. ಕೃತ್ಯ ನಡೆದ ದಿನ ಗಫೂರ್ ಹಾಜಿ ಮಾತ್ರ ಮನೆಯಲ್ಲಿದ್ದರು. ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ತೆರಳಿದ್ದರು. ಮರಳಿ ಬಂದಾಗ ಗಫೂರ್ ಮನೆಯ ಕೊನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಸಹಜ ಸಾವು ಎಂದು ಪತ್ನಿ, ಮಕ್ಕಳು, ಸಂಬಂಧಿಕರು ನಂಬಿದ್ದರು. ಇದರಿಂದ ಮೃತದೇಹವನ್ನು ದಫನ ಮಾಡಲಾಗಿತ್ತು. ದಿನಗಳ ಬಳಿಕ ಗಮನಿಸಿದಾಗ ಮನೆಯಿಂದ 596 ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅಬ್ದುಲ್ ಗಫೂರ್ ರ ಪುತ್ರ ಅಹ್ಮದ್ ಮುಸಮ್ಮಿಲ್ ಬೇಕಲ ಠಾಣಾ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದರು.

ಗಫೂರ್ ಹಾಜಿ ಅವರ ಕೊಲೆಯ ಬಳಿಕ ನಾಪತ್ತೆಯಾಗಿರುವ 596 ಪವನ್ ಆಭರಣಗಳ ವಶಕ್ಕೆ ತನಿಖಾ ತಂಡ ಪ್ರಕ್ರಿಯೆ ಆರಂಭಿಸಿದೆ. ಕೆಲವು ಚಿನ್ನಾಭರಣವನ್ನು ಮೂವರು ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಿದೆ.

ದೂರಿನ ಹಿನ್ನಲೆಯಲ್ಲಿ ಬೇಕಲ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. 2023 ಎ. 27ರಂದು ಗಫೂರ್ ಹಾಜಿ ಅವರ ಮೃತದೇಹವನ್ನು ಸಮಾಧಿಯಿಂದ ಹೊರತೆಗೆಯಲಾಯಿತು ಮತ್ತು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಾಯವಾಗಿರುವುದು ಕಂಡುಬಂದಿತ್ತು. ಇದರಿಂದ ಕೊಲೆ ಎಂಬುದು ಸ್ಪಷ್ಟಗೊಂಡಿತ್ತು.

ತನಿಖಾ ತಂಡವು ಮನೆಯವರು, ಕುಟುಂಬಸ್ಥರು, ನಾಗರಿಕರು ಹಾಗೂ ಕ್ರಿಯಾ ಸಮಿತಿ ಸೇರಿದಂತೆ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಿತ್ತು.

ತನಿಖೆ ವೇಳೆ ಶಮೀಮಾಳ ಸಹಚಾರರ ಬ್ಯಾಂಕ್ ಖಾತೆಗೆ ಭಾರಿ ಮೊತ್ತದ ಹಣ ಜಮಾ ಆಗಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ. ಮೃತ ಗಫೂರ್ ಹಾಜಿ ಮತ್ತು ಶಮಿಮಾಳ ನಡುವೆ ನಡೆದ ವಾಟ್ಸಾಪ್ ಸಂದೇಶಗಳು ಪೊಲೀಸರಿಗೆ ಲಭಿಸಿದೆ. ಶಮೀಮಾ ಗಫೂರ್‌ ಹಾಜಿ ಅವರಿಂದ ಹಿಂದೆ 10 ಲಕ್ಷ ರೂ. ನಗದು ಮತ್ತು ಚಿನ್ನಾಭರಣಗಳನ್ನು ಪಡೆದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದ್ದು, ಹಲವು ಪುರಾವೆಗಳು ಪೊಲೀಸರಿಗೆ ಲಭಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News