ಯುವ ವಿದ್ವಾಂಸರು ಕಠಿಣ ತ್ಯಾಗಕ್ಕೂ ಸಿದ್ಧರಾಗಿರಬೇಕು: ಎ ಪಿ ಉಸ್ತಾದ್
ಕಾಸರಗೋಡು: ಬಿಕ್ಕಟ್ಟುಗಳಿಂದ ಕೂಡಿದ ಸಮಕಾಲೀನ ಪರಿಸ್ಥಿತಿಯಲ್ಲಿ ಆದರ್ಶಗಳ ರಕ್ಷಣೆಗಾಗಿ ಯುವ ವಿದ್ವಾಂಸರು ಕಠಿಣ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಜಾಮಿಅ ಸಅದಿಯ್ಯಾದ 55 ನೇ ವಾರ್ಷಿಕ ಮಹಾ ಸಮ್ಮೇಳನದ ಸಮಾರೋಪ ಸಮಾರಂಭಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು. ಅನುಗ್ರಹಗಳಿಗೆ ನಾವು ಯಾವಾಗಲೂ ಕೃತಜ್ಞರಾಗಿರಬೇಕು. ನಮ್ಮ ಎಲ್ಲಾಕಾರ್ಯಗಳು ಅನುಕಂಪ ಸಹಾನುಭೂತಿಯಿಂದ ಕೂಡಿರಬೇಕು. ಸಅದಿಯ್ಯದ ಶಿಲ್ಪಿಗಳಾದ ನೂರುಲ್ ಉಲಮಾ ಹಾಗೂ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿ ಅವರ ಸಮರ್ಪಣೆ ಸರ್ವಕಾಲಕ್ಕೂ ಸ್ಮರಣೀಯವಾಗಿದೆ ಎಂದರು.
ರವಿವಾರ ಸಾಯಂಕಾಲ 5:00 ಗಂಟೆಗೆ ಪ್ರಾರಂಭಗೊಂಡ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಅಲಿ ಬಾಫಕಿ ತಂಙಳ್ ದುಆ ನೆರವೇರಿಸಿದರು. ಅರಬ್ ಲೀಗ್ ರಾಯಭಾರಿ ಡಾ. ಮಾಝಿನ್ ನಾಇಫ್ ಅಲ್ ಮಸ್‌ಊದಿ ಉದ್ಘಾಟಿಸಿದರು.
ಸಮಸ್ತ ಅಧ್ಯಕ್ಷ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಸನದುದಾನ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶೇಖ್ ಹೈಸಮ್ ದಾದ್ ಅಲ್ ಕರೀಂ ಮತ್ತು ಹಬೀಬ್ ಸಾಲಿಂ ಇಬ್ನ್ ಉಮರ್ ಹಫೀಲ್ ಯಮನ್ ಭಾಗವಹಿಸಿದ್ದರು. ಪ್ರಿನ್ಸಿಪಾಲ್ ಸಅದುಲ್ ಉಲಮಾ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ ಅವರು ಸನದುದಾನ ಭಾಷಣ ಮಾಡಿದರು. 445 ಸಅದಿ 44 ಅಫ್ಳಲಿ 28 ಖುರ್‌ಆನ್ ಹಾಫಿಳ್ ಗಳಿಗೆ ಸನದ್ ನೀಡಲಾಯ್ತು.
ಕಾರ್ಯಕ್ರಮದಲ್ಲಿ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ, ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಷಣ ಮಾಡಿದರು. ಕೈಗಾರಿಕೋದ್ಯಮಿ ಹಾಗೂ ಬನಿಯಾಸ್ ಸ್ಪೈಕ್ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಸಿ ಪಿ ಅಬ್ದುಲ್ ರಹಮಾನ್ ಹಾಜಿ ಅವರಿಗೆ ಕಲ್ಲಟ್ರ ಅವಾರ್ಡ್ ನೀಡಿ ಗೌರವಿಸಲಾಯಿತು.
ಕರ್ನಾಟಕ ಕೇರಳದ ಸಾವಿರಾರು ಸುನ್ನೀ ಕಾರ್ಯಕರ್ತರು, ದೇಶ ವಿದೇಶಗಳ ಉಲಮಾ ಪ್ರತಿನಿಧಿಗಳು ಸಮೇಳನದಲ್ಲಿ ಭಾಗವಹಿಸಿದ್ದರು. ಕೆ ಸಿ ರೋಡ್ ಹುಸೈನ್ ಸಅದಿ ಸ್ವಾಗತಿಸಿದರು. ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ ಧನ್ಯವಾದ ಸಲ್ಲಿಸಿದರು.
ಜಾಮಿಅ ಸಅದಿಯ್ಯದ 55 ನೇ ವಾರ್ಷಿಕದ ಅಂಗವಾಗಿ ರವಿವಾರ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಕೆ.ಪಿ.ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ವಿ ಪಿ ಎಂ ಫೈಝಿ ವಿಲ್ಯಾಪಳ್ಳಿ, ಹಸನ್ ಮುಸ್ಲಿಯಾರ್ ವಯನಾಡು, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎಂ.ವಿ.ಅಬ್ದುಲ್ ರೆಹಮಾನ್ ಬಾಖವಿ, ಕೆ.ಕೆ.ಹುಸೈನ್ ಬಾಖವಿ ಭಾಗವಹಿಸಿ ಮಾತನಾಡಿದರು. ತಅಮೀರೆ ಮಿಲ್ಲತ್ ಉರ್ದು ಕಾನ್ಫರೆನ್ಸ್ ಶೈಖ್ ಅಶ್ರಫ್ ಜೀಲಾನಿ ನಕ್ಷಬಂದಿ ಉದ್ಘಾಟಿಸಿದರು. ಸ್ಥಾನ ವಸ್ತ್ರ ವಿತರಣೆಯನ್ನು ಸೈಯದ್ ಹಮೀದ್ ಇಂಬಿಚ್ಚಿಕೋಯ ತಂಙಳ್ ಕೊಯಿಲಾಂಡಿ ನೆರವೇರಿಸಿದರು. ಬಳಿಕ ಸಅದಿ ಉಲಮಾ ಸಂಗಮ ಎಮಿನೆನ್ಸ್ ಮೀಟ್, ಅಲುಮ್ನಿ ಮೀಟ್ ನಡೆಯಿತು.
ಫೆಬ್ರವರಿಯಲ್ಲಿ ಅರಬ್ ಲೀಗ್ ಶೃಂಗಸಭೆ
ಅರಬ್ ಲೀಗ್ ವ್ಯವಸ್ಥೆಯನ್ನು ಭಾರತ ಸದಾ ಬೆಂಬಲಿಸುತ್ತಿದ್ದು, ಮುಂದಿನ ಅರಬ್ ಲೀಗ್ ಶೃಂಗಸಭೆಯನ್ನು ಫೆಬ್ರವರಿಯಲ್ಲಿ ಭಾರತದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಅರಬ್ ಲೀಗ್ ಅಂಬಾಸಿಡರ್ ಮಾಝಿನ್ ನಾಇಫ್ ಅಲ್ ಮಸ್‌ಊದಿ ಹೇಳಿದರು. ಜಾಮಿಯಾ ಸ ಅದಿಯಾದ 55 ನೇ ವಾರ್ಷಿಕ ಸನದ್ ದಾನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ಯಾಲೆಸ್ತೀನ್ ಕದನ ವಿರಾಮಕ್ಕೆ ಭಾರತದ ಮಧ್ಯಸ್ಥಿಕೆ ಶುಭಕರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಾಮಿಯಾ ಸಅದಿಯ್ಯ ಅರೇಬಿಕ್ ಭಾಷೆಯ ಪ್ರಚಾರ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಮ್ಮ ಅಧ್ಯಯನವನ್ನು ಮುಗಿಸಿ ಹೊರಬರುವ ವಿದ್ವಾಂಸರು ಸೇವಾ ಮತ್ತು ಸಂಶೋಧನಾ ಕ್ಷೇತ್ರದತ್ತ ಗಮನ ಹರಿಸಬೇಕು ಎಂದರು.