ಬ್ರಿಟನ್ ದೊರೆ ಚಾರ್ಲ್ಸ್ ರ ಸಹಾಯಕ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡು ಮೂಲದ ಮುನಾ ಶಂಸುದ್ದೀನ್ ನೇಮಕ
ಕಾಸರಗೋಡು: ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರ ಸಹಾಯಕ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡು ಮೂಲದ ಮುನಾ ಶಂಸುದ್ದೀನ್ ನೇಮಕಗೊಂಡಿದ್ದಾರೆ. ದೊರೆ ಚಾರ್ಲ್ಸ್ ರ ಅಧಿಕೃತ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಮುನಾಗೆ ವಹಿಸಲಾಗಿದೆ.
ಕಾಸರಗೋಡು ತೆರುವತ್ ಹಾಶಿಮ್ ಸ್ಟ್ರೀಟ್ ನಿವಾಸಿ ಮರ್ಹೂಂ ಶಂಸುದ್ದೀನ್ ಮತ್ತು ಸೈದುನ್ನಿಸಾ ದಂಪತಿ ಪುತ್ರಿಯಾಗಿರುವ ಮುನಾ ಅವರು ಲಂಡನ್ ನಲ್ಲೇ ಬೆಳೆದು ಅಲ್ಲೇ ಶಿಕ್ಷಣ ಪಡೆದಿದ್ದಾರೆ. ಬ್ರಿಟಿಷ್ ಕಾನೂನು ವಿಶ್ವವಿದ್ಯಾನಿಲಯದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಅವರು ಲಂಡನ್ ವಿದೇಶಾಂಗ ಕಾಮನ್ವೆಲ್ತ್ ಡೆವಲಪ್ ಮೆಂಟ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ ಬ್ರಿಟನ್ ದೊರೆಯ ಸಹಾಯಕ ಖಾಸಗಿ ಕಾರ್ಯದರ್ಶಿಯಾಗುವ ಅವಕಾಶ ಅವರನ್ನು ಅರಸಿ ಬಂದಿದೆ.
ಮುನಾ ಶಂಸುದ್ದೀನ್ ಅವರು ನಾಟಿಂಗ್ ಹ್ಯಾಮ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಮತ್ತು ಎಂಜಿನಿಯರ್ ನಲ್ಲಿ ಅಧ್ಯಯನ ಪೂರ್ಣ ಗೊಳಿಸಿದ ನಂತರ ಬ್ರಿಟಿಷ್ ವಿದೇಶಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಜೆರುಸಲೇಮ್ ನಲ್ಲಿ ಕಾನ್ಸೆಲೆಟ್ ಜನರಲ್ ಮತ್ತು ಪಾಕಿಸ್ತಾನದ ಕರಾಚಿಯಲ್ಲಿ ಡೆಪ್ಯೂಟಿ ಹೆಡ್ ಆಫ್ ಮಿಷನ್ ಸೇರಿದಂತೆ ಪ್ರಮುಖ ರಾಜತಾಂತ್ರಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರ ಪತಿ ಡೇವಿಡ್ ವಿಶ್ವಸಂಸ್ಥೆಯ ಉದ್ಯೋಗಿಯಾಗಿದ್ದಾರೆ. ಮುನಾ ಹತ್ತು ವರ್ಷಗಳ ಹಿಂದೆ ಕಾಸರಗೋಡಿಗೆ ಆಗಮಿಸಿದ್ದರು.